ಭಯಮುಕ್ತ ರಾಜ್ಯ ನಿರ್ಮಾಣಕ್ಕೆ ಸರ್ಕಾರ ಬದ್ಧ: ಸಿದ್ದರಾಮಯ್ಯ
ಹಸಿವು, ಬಡತನ, ಅನಕ್ಷರತೆ, ಅನಾರೋಗ್ಯ ಹಾಗೂ ಭಯಮುಕ್ತ ರಾಜ್ಯ ನಿರ್ಮಾಣಕ್ಕೆ ಸರ್ಕಾರ...
ಬೆಂಗಳೂರು: ಹಸಿವು, ಬಡತನ, ಅನಕ್ಷರತೆ, ಅನಾರೋಗ್ಯ ಹಾಗೂ ಭಯಮುಕ್ತ ರಾಜ್ಯ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾತಂತ್ರ್ಯೋತ್ಸವದ ದಿನ ನಾಡಿನ ಜನತೆಗೆ ಭರವಸೆ ನೀಡಿದರು.
ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, 20 ಪುಟಗಳ ಲಿಖಿತ ಭಾಷಣದಲ್ಲಿ ವಿವಿಧ ಯೋಜನೆಗಳನ್ನು ವಿವರಿಸಿ ಸರ್ಕಾರದ ಸಾಧನೆ ಪ್ರಸ್ತುತಪಡಿಸಿದರು.
ಯಾವುದೇ ಹೊಸ ಘೋಷಣೆ ಮಾಡದೆ, ಜಾರಿಯಲ್ಲಿರುವ ಯೋಜನೆಗಳ ಬಗ್ಗೆ ಹೆಚ್ಚು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ, ಕೈಗಾರಿಕೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಇಂಧನ ಮೊದಲಾದ ವಲಯಗಳಲ್ಲಿ ಜಾರಿಗೊಳಿಸಿರುವ ಯೋಜನೆಗಳನ್ನೇ ಪ್ರಸ್ತಾಪಿಸಿದರು. ಜೊತೆಗೆ ತಮ್ಮ ಸರ್ಕಾರ ಹಸಿವು, ಬಡತನ, ಅನಕ್ಷರತೆ, ಅನಾರೋಗ್ಯ ಹಾಗೂ ಭಯಮುಕ್ತ ರಾಜ್ಯ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಹೆಚ್ಚಿದ ಅತ್ಯಾಚಾರ ಪ್ರಕರಣ ಕುರಿತು ಮಾತನಾಡಿದ ಅವರು, ಹೆಣ್ಣುಮಕ್ಕಳು ನಡುರಾತ್ರಿಯಲ್ಲಿಯೂ ನಿರ್ಭೀತಿಯಿಂದ ಓಡಾಡುವಂತಾಗಬೇಕು ಎಂಬ ಗಾಂಧೀಜಿ ಮಾತನ್ನು ನೆನಪಿಸಿಕೊಂಡರು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಮನಸ್ಸನ್ನು ಕಲಕಿದ್ದು, ದೌರ್ಜನ್ಯ ತಡೆಗೆ ಕಾನೂನು ಬಿಗಿಗೊಳಿಸಲಾಗಿದೆ. ಹೆಚ್ಚಿನ ಪ್ರಕರಣ ಪರಿಚಿತರಿಂದ ನಡೆಯುವುದರಿಂದ ಕಾನೂನಿಂದ ಮಾತ್ರ ಅಪರಾಧ ನಿಯಂತ್ರಣ ಅಸಾಧ್ಯ. ಸರ್ಕಾರದೊಂದಿಗೆ ಸಮಾಜವೂ ಕೈ ಜೋಡಿಸಬೇಕು ಎಂದರು.
ಪ್ರಣಾಳಿಕೆಯಲ್ಲಿನ 165, ಭರವಸೆಗಳಲ್ಲಿ 95 ಈಗಾಗಲೇ ಈಡೇರಿಕೆ
ಆರು ತಿಂಗಳಲ್ಲಿ 1.16 ಲಕ್ಷ ಮನೆಗಳ ವಿದ್ಯುದೀಕರಣ
571 ಹೋಬಳಿಗಳಲ್ಲಿ ಸಾಮಯವ ಭಾಗ್ಯ ಯೋಜನೆ ಆರಂಭ