ಭರಚುಕ್ಕಿಯಲ್ಲಿ ಬಣ್ಣದ ಚಿತ್ತಾರ
ಕರ್ನಾಟಕದ ನಯಾಗರ ಎಂದೇ ಪ್ರಸಿದ್ಧವಾಗಿರುವ ಭರಚುಕ್ಕಿಯಲ್ಲಿ ಶನಿವಾರ..
ಚಾಮರಾಜನಗರ: ಕರ್ನಾಟಕದ ನಯಾಗರ ಎಂದೇ ಪ್ರಸಿದ್ಧವಾಗಿರುವ ಭರಚುಕ್ಕಿಯಲ್ಲಿ ಶನಿವಾರದಿಂದ ಎರಡು ದಿನ ಜಲಪಾತೋತ್ಸವ ನಡೆಯಲಿದೆ.
ದೇಶ-ವಿದೇಶಗಳಲ್ಲೂ ಭರಚುಕ್ಕಿಯ ವೈಭವ ಪರಿಚಯಿಸುವ ಸಲುವಾಗಿ ಚಾಮರಾಜನಗರ ಜಿಲ್ಲಾಡಳಿತ ಆ.16 ಮತ್ತು 17ರಂದು ಜಲಪಾತೋತ್ಸವ ಆಯೋಜಿಸಿದ್ದು, ಸೂರ್ಯಸ್ತದ ಬಳಿಕ ದಟ್ಟ ಕಾನನದ ಮಧ್ಯ ಹಾಲ್ನೊರೆಯಂತೆ ಹರಿಯುವ ಜಲಧಾರೆ ಪ್ರತಿ ನಿಮಿಷಕ್ಕೊಂದರಂತೆ ಏಳು ಬಣ್ಣಗಳಲ್ಲಿ ಪ್ರವಾಸಿಗರನ್ನು ಸೆಳೆಯಲಿದೆ. ಉತ್ಸವದ ಪ್ರಮುಖ ಆಕರ್ಷಣೆಯೇ ದೀಪಾಲಂಕಾರ. ಜಲಪಾತಕ್ಕೆ 16 ಪೋಕಾಸ್ ಲೈಟ್‌ಗಳನ್ನು ಅಳವಡಿಸಲಾಗಿದೆ.
ಕಲಾವೈಭವ
ಭರಚುಕ್ಕಿಯಲ್ಲಿ ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪನಿಯಿಂದ ಓಜೋನ್ ಪ್ರೋಗ್ರಾಮ್(ನೃತ್ಯ ರೂಪಕ), ನೆನಪಿರಲಿ ಪ್ರೇಮ್, ಎಲ್.ಎನ್.ಶಾಸ್ತ್ರೀ, ಆರ್ಚನಾ ತಂಡದವರಿಂದ ಚಲನಚಿತ್ರ ಸಂಗೀತ ಗಂಗೆ, ಅಪ್ಪಗೆರೆ ತಿಮ್ಮರಾಜು ತಂಡದವರಿಂದ ಜನಪದ ಸಂಗೀತ ಗಂಗೆ, ಮಂಗಳೂರಿನ ಸನಾತನ ನೃತ್ಯಾಲಯದ ಕಲಾವಿದರಿಂದ ನೃತ್ಯ ಸಂಜೆ, ಗುರುಕಿರಣ್ ಮತ್ತು ತಂಡದವರಿಂದ ಚಲನಚಿತ್ರ ಕಾರಂಜಿ ಚಿಮ್ಮಲಿದೆ. ಒಟ್ಟು 14 ಕಲಾ ತಂಡಗಳು ಭಾಗವಹಿಸಲಿವೆ. ಕೊನೆಯ ದಿನ ಬಾನಂಗಳದಲ್ಲಿ ಆಕರ್ಷಕ ಬೆಳಕಿನ ಚಿತ್ತಾರ ಮೂಡಿಸುವ ಸಿಡಿಮದ್ದಿನ ಪ್ರದರ್ಶನವಿದೆ.
-ದೇವರಾಜು ಕಪ್ಪಸೋಗೆ