ಫಲಪುಷ್ಪ ಪ್ರದರ್ಶನ ಹೆಸರಲ್ಲಿ ವಂಚನೆ?
ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದ ಹೆಸರಿನಲ್ಲಿ ...
ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದ ಹೆಸರಿನಲ್ಲಿ ಜನರನ್ನು ಹಾಗೂ ಸರ್ಕಾರವನ್ನು ವಂಚಿಸಲಾಗುತ್ತಿದೆಯೇ?
ಹೌದು, ಫಲಪುಷ್ಪ ಪ್ರದರ್ಶನದ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಮತ್ತೊಂದೆಡೆ ಪ್ರದರ್ಶನ ಸಂಬಂಧ ಯಾವುದೇ ಮಾಹಿತಿ ಪಾರದರ್ಶಕವಾಗಿಲ್ಲ. ಅಲ್ಲದೆ ಪ್ರಮುಖವಾಗಿ ಫಲಪುಷ್ಪ ಪ್ರದರ್ಶನದಿಂದ ಬರುವ ಕೋಟ್ಯಂತರ ರುಪಾಯಿ ಲಾಭದ ಹಣವನ್ನು ಸರ್ಕಾರಕ್ಕೆ ನೀಡದೆ ವಂಚಿಸಲಾಗುತ್ತಿದೆ.
ಪ್ರದರ್ಶನದ ವೇಳೆ ಸಂಗ್ರಹವಾಗುವ ಕೋಟ್ಯಂತರ ರುಪಾಯಿ ಹಣ ಸರ್ಕಾರದ ಬೊಕ್ಕಸ ಸೇರುತ್ತಿಲ್ಲ. ಬದಲಾಗಿ ಸಂಘದ ಹೆಸರಿನಲ್ಲಿ ಸಂಘದ ಖಾತೆ ಸೇರುತ್ತಿದೆ. ಅದು ಎಷ್ಟು ಎಂಬ ಬಗ್ಗೆಯೂ ನಿಖರ ಮಾಹಿತಿ ಇಲ್ಲ ಎಂದು ಆರ್‌ಟಿಐ ಕಾರ್ಯಕರ್ತರು ಆರೋಪಿಸಿದ್ದು, ತನಿಖೆಗೆ ಆಗ್ರಹಿಸಿ ಲೋಕಾಯುಕ್ತ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ, ಫಲಪುಷ್ಪ ಪ್ರದರ್ಶನದಿಂದ ಬರುವ ಲಾಭದ ಹಣವೆಷ್ಟು, ಆಗುವ ಖರ್ಚೆಷ್ಟು ಎಂಬುದು ಪಾರದರ್ಶಕವಾಗಿರಬೇಕು. ಹಾಗಾಗಿ ಇದುವರೆಗೂ ಆಗಿರುವ ವಂಚನೆಯನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರತಿಬಾರಿ ಫಲಪುಷ್ಪ ಪ್ರದರ್ಶನದ ವೇಳೆ ಲಾಭದ ಗಡಿ ಕೋಟ್ಯಂತರ ರುಪಾಯಿ ದಾಟುತ್ತಿದೆ. ಫಲಪುಷ್ಪ ಪ್ರದರ್ಶನ ವೀಕ್ಷಕರ ಸಂಕ್ಯೆಯೂ ಹೆಚ್ಚುತ್ತಿದೆ. ಹಾಗಾಗಿ ಫಲಪುಷ್ಪ ಪ್ರದರ್ಶನವನ್ನು ಸಂಘಕ್ಕೆ ವಹಿಸುವ ಬದಲು ಸರ್ಕಾರವೇ ನಡೆಸಬೇಕು. ಈ ಮೂಲಕ ಪಾರದರ್ಶಕತೆ ಕಾಪಾಡಬೇಕು ಹಾಗೂ ಆಗುತ್ತಿರುವ ವಂಚನೆಯನ್ನು ತಡೆಗಟ್ಟಬೇಕು ಎಂಬುದು ಕಾರ್ಯಕರ್ತರ ಒತ್ತಾಯ.
ಏನಿದು ವಿವಾದ: 1912ರಲ್ಲಿ ಆರಂಭವಾದ ಮೈಸೂರು ಉದ್ಯಾನ ಕಲಾಸಂಗವು ವರ್ಷದಲ್ಲಿ 2 ಬಾರಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಸಲು ಬೈಲಾದಲ್ಲಿ ಸೂಚಿಸಲಾಗಿದೆ. ಅದೇ ರೀತಿ ಪ್ರದರ್ಶನಕ್ಕೆ ಆಗುವ ಖರ್ಚನ್ನು ಸಂಘವೇ ಭರಿಸುತ್ತದೆ. ಬಂದ ಲಾಭದಲ್ಲಿ ಮೂರನೇ ಒಂದು ಭಾಗವನ್ನು ತೋಟಗಾರಿಕಾ ಇಲಾಖೆಗೆ ನೀಡುತ್ತದೆ. ಆದರೆ, ಹಣ ಎಷ್ಟು ಖರ್ಚಾಗಿದೆ, ಹೂ ಪುಷ್ಪ, ಕುಂಡಗಳು ಸೇರಿದಂತೆ ಪ್ರದರ್ಶನಕ್ಕೆ ಬೇಕಾಗುವು ಸಾಮಗ್ರಿಗಳನ್ನು ಎಲ್ಲಿಂದ ತರಲಾಗುತ್ತದೆ ಎಂಬುದು ಪಾರದರ್ಶಕವಾಗಿಲ್ಲ. ಲಾಲ್‌ಬಾಗ್‌ನಲ್ಲಿ ಹೂ ಕುಂಡಗಳನ್ನೇ ಖರೀದಿಸಿ, ಹೊರಗಿನಿಂದ ತರಲಾಗಿದೆ ಎಂದು ಬಿಲ್ ತೋರಿಸಲಾಗುತ್ತಿದೆ.