ಇಂದಿರಾನಗರ ರಸ್ತೆಗೆ ಕರೀಂಖಾನ್ ಹೆಸರಿಡಲು ವಾಟಳ್ ಆಗ್ರಹ
ಬೆಂಗಳೂರು: ಇಂದಿರಾನಗರದ ನೂರಡಿ ರಸ್ತೆಗೆ ಜಾನಪದ ಲೋಕದ ಪಿತಾಮಹ ಡಾ. ಎಸ್.ಕೆ ಕರೀಂಖಾನ್ ಹೆಸರಿಡಲು ಬಿಬಿಎಂಪಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕನ್ನಡ ಪರ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ಇಂದಿರಾನಗರ ರಸ್ತೆಗೆ ಕರೀಖಾನ್ ಅವರ ಹೆಸರನ್ನು ನಾಮಕರಣ ಮಾಡಲು ಬಿಬಿಎಂಪಿ ಕ್ರಮಕೈಗೊಳ್ಳದಿದ್ದರೆ ಆ.23ಕ್ಕೆ ಉಗ್ರ ಹೋರಾಟ ನಡೆಸುವುದಾಗಿ ವಾಟಾಳ್ ಎಚ್ಚರಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕರೀಂಖಾನ್ ಕನ್ನಡ ನಾಡಿನ ಜಾನಪದ ದಿಗ್ಗಜರಾಗಿದ್ದು, ಕರ್ನಾಟಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಇಂದಿರಾನಗರ ರಸ್ತೆಗೆ ನಾಮಕರಣ ಮಾಡಲು 2006ರಲ್ಲಿ ಬಿಬಿಎಂಪಿ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಇದ್ದರು. ಬಿಬಿಎಂಪಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಒಂದು ವೇಳೆ ಬಿಬಿಎಂಪಿ ರಸ್ತೆಗೆ ಕರೀಂ ಹೆಸರಿಡುವ ವಿಚಾರ ಮರೆತ್ತಿದ್ದೇ ಆದರೆ, ಈಗಲಾದರು ಎಚ್ಚೆತ್ತು ರಸ್ತೆಗೆ ಕರೀಂ ಹೆಸರಿಡುವ ಕಾರ್ಯ ಮಾಡಲಿ, ಇಲ್ಲದೇ ಹೋದರೆ ಆಗಸ್ಟ್ 23 ರಂದು ಬೆಳಿಗ್ಗೆ 11ಕ್ಕೆ ಬಿಬಿಎಂಪಿ ಕಛೇರಿ ಮುಂದೆಯೇ ಸತ್ಯಾಗ್ರಹ ಹಾಗೂ ತಮಟೆ ಚಳುವಳಿಯನ್ನು ನಡೆಸಲಾಗುತ್ತದೆ ಎಂದು ವಾಟಾಳ್ ಹೇಳಿದ್ದಾರೆ.
ನಂತರ ಮಾತನಾಡಿದ ಚಲನಚಿತ್ರ ನಿರ್ಮಾಪಕ ಸಾ.ರಾ.ಗೋವಿಂದ್ ರಸ್ತೆಯೊಂದಕ್ಕೆ ಕರೀಂಖಾನ್ ನಾಡಿನ ಹೆಸರಾಂತ ಜಾನಪದ ಹೋರಾಟಗಾರ, ಇಂತಹ ಸಂಸ್ಕೃತಿ ಹಾಗೂ ಕಲೆ ಹೋರಾಟಗಾರರ ಹೆಸರಿಡಲು ಬಿಬಿಎಂಪಿ ಹಿಂದೆ ಮುಂದೆ ನೋಡುತ್ತಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ. ಸರ್ಕಾರದಿಂದ ಕರೀಂ ಖಾನ್‌ಗೆ ಸಿಗಬೇಕಾದ ಯಾವುದೇ ಗೌರವಗಳು ಇಂದಿಗೂ ಅವರಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.