ಚಿತ್ರನಟರಿಗೆ ವಾಟಾಳ್, ಸಾ.ರಾ.ಗೋವಿಂದ್ ಬೆಂಬಲ
ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುವ ಚಿತ್ರ ನಟರನ್ನು ನಿಷೇಧಿಸಬೇಕೆನ್ನುವ ನಿರ್ಮಾಪಕ..
ಬೆಂಗಳೂರು: ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುವ ಚಿತ್ರ ನಟರನ್ನು ನಿಷೇಧಿಸಬೇಕೆನ್ನುವ ನಿರ್ಮಾಪಕರ ವಾದವನ್ನು ವಾಟಾಳ್ ನಾಗಾರಾಜ್ ಹಾಗೂ ನಿರ್ಮಾಪಕ ಸಾ.ರಾ.ಗೋವಿಂದ್ ವಿರೋಧಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ನಿರ್ಮಾಪಕರು ಕಲಾವಿದರ ಮನವೊಲಿಸುವ ಪ್ರಯತ್ನ ಮಾಡಬೇಕೇ ವಿನಃ, ಏಕಾಏಕಿ ನಿಷೇಧ ಮಾಡುತ್ತೇವೆ ಎಂಬ ವಾದ ಮಂಡಿಸುವುದು ಅತ್ಯಂತ ಉದ್ಧಟತನದ ಮಾತು. ಇಂತಹ ನಿರ್ಧಾರವನ್ನು ಕನ್ನಡ ಪರ ಒಕ್ಕೂಟಗಳು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಯಾವುದೇ ಸಮಸ್ಯೆ ಎದುರಾದರೆ ಚಲನಚಿತ್ರ ಮಂಡಳಿ ಏಕಮತವಾಗಿ ಕಾರ್ಯ ನಿರ್ವಹಿಸುವ ಕೆಲಸ ಮಾಡಬೇಕು. ಒಂದು ಸಮಸ್ಯೆ ಎದುರಾದರೆ ಎಲ್ಲರನ್ನು ಕರೆದು ಚರ್ಚೆ ಮಾಡಿ ಒಮ್ಮತ ನಿರ್ಧಾರಕ್ಕೆ ಬರುವಂತೆ ಮಾಡುವುದು ಮಂಡಳಿಯ ಕರ್ತವ್ಯ. ಇಂತಹ ಜವಾಬ್ದಾರಿಯುತ ಕೆಲಸ ಮಾಡದೇ ಏಕಾಏಕಿ ಕಿರುತೆರೆಯಲ್ಲಿ ನಿರೂಪಣೆ ಮಾಡುವ ನಟರನ್ನು ನಿಷೇಧಿಸುತ್ತೇವೆಂದು ಹೇಳುತ್ತಿರುವುದು ಕೆಟ್ಟ ನಿರ್ಧಾರ ಎಂದು ಅವರು ಖಂಡಿಸಿದರು.
ಒಂದು ವೇಳೆ ನಿರ್ಮಾಪಕರು ತಮ್ಮ ವಾದವನ್ನು ಹೀಗೆಯೇ ಮುಂದುವರೆಸಿದರೆ ಚಲನಚಿತ್ರ ಮಂಡಳಿಯ ವಿರುದ್ಧ ಉಗ್ರ ಹೋರಾಟವನ್ನು ಕೈಗೊಳ್ಳುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಬಳಿಕ ಮಾತನಾಡಿದ ನಿರ್ಮಾಪಕ ಸಾ.ರಾ. ಗೋವಿಂದ್ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇರುವಂತಹದ್ದು, ಅಂತಹ ಸ್ವಾತಂತ್ರ್ಯಕ್ಕೆ ದಕ್ಕೆ ತರುವಂತಹ ಕೆಲಸವನ್ನು ನಿರ್ಮಾಪಕರು ಮಾಡಬಾರದು. ನಿರ್ಮಾಪಕರು ನಟರೊಂದಿಗೆ ಸರಿಯಾದ ರೀತಿಯಲ್ಲಿ ಒಪ್ಪಂದಗಳನ್ನು ಮಾಡಿಕೊಂಡರೆ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಹೀಗಾಗಿ ನಟರನ್ನು ನಿಷೇಧಿಸುವ ನಿರ್ಧಾರವನ್ನು ನಾನು ಬೆಂಬಲಿಸುವುದಿಲ್ಲ ಎಂದರು.
ವಾರಾಂತ್ಯ ದಿನಗಳಾದ ಶನಿವಾರ ಮತ್ತು ಭಾನುವಾರ ಚಿತ್ರಮಂದಿರಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿ ಬರುತ್ತಾರೆ. ಇದೇ ವೇಳೆ ನಟರು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತಿದ್ದರೇ, ಪ್ರೇಕ್ಷಕರು ಚಿತ್ರಮಂದಿರದತ್ತಾ ಮುಖ ಮಾಡುವುದಿಲ್ಲ. ಹೀಗಾಗಿ ಕೋಟಿಗಟ್ಟಲೇ ಹಣ ಸುರಿದು ಮಾಡಿದ ಸೋಲುತ್ತದೆ ಇದರಿಂದ ನಿರ್ಮಾಪಕರು ನಷ್ಟಕ್ಕೆ ಒಳಗಾಗುತ್ತಾರೆ ಎಂಬುದು ನಿರ್ಮಾಪಕರ ವಾದವಾಗಿದೆ.
ಈ ಕಾರಣದಿಂದ ನಿರ್ಮಾಪಕರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಸ್ಟಾರ್ ನಟರಿಗೆ ಕಡಿವಾಣ ಹಾಕುವ ಸಲುವಾಗಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರುಬೇಕು ಎಂಬ ವಾದ ಮಂಡಿಸುತ್ತಿದೆ. ಆದರೆ ಈ ನಿರ್ಧಾರಕ್ಕೆ ನಟರು ಹಾಗೂ ನಟರ ಪರವಾಗಿರುವವರು ನಿರ್ಮಾಪಕ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕರ ವಾದಕ್ಕೆ ಪ್ರತಿಕ್ರಿಯಿಸಿದ್ದ ನಟ ರಮೇಶ್ ನಮಗೂ ಸ್ವಾತಂತ್ರ್ಯ ಇದೆ. ಅಲ್ಲದೇ ನಾನು ಒಬ್ಬ ನಟನಾಗಿ, ನಿರೂಪಕನಾಗಿ, ನಿರ್ದೇಶಕನಾಗಿ ಗುರ್ತಿಸಿಕೊಳ್ಳಲು ಬಯಸುತ್ತೇನೆ ಎಂದು ತಮ್ಮ ವಿರೋಧ ವ್ಯಕ್ತಪಡಿಸಿದ್ದರು.