ಸಚಿವರು, ಶಾಸಕರ ಪ್ರವಾಸಕ್ಕೆ ಸರ್ಕಾರದ ಹಣ ಇಲ್ಲ: ಸಿಎಂ
ಸಚಿವರು ಮತ್ತು ಶಾಸಕರನ್ನು ಸರ್ಕಾರದ ಖರ್ಚಿನಲ್ಲಿ ಅಕ್ಕ ಸಮ್ಮೇಳನಕ್ಕೆ ...
ಬೆಂಗಳೂರು: ಸಚಿವರು ಮತ್ತು ಶಾಸಕರನ್ನು ಸರ್ಕಾರದ ಖರ್ಚಿನಲ್ಲಿ ಅಕ್ಕ ಸಮ್ಮೇಳನಕ್ಕೆ ಕಳುಹಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅವರು ಬೇಕಾದರೆ ತಮ್ಮ ಸ್ವಂತ ಖರ್ಚಿನಲ್ಲಿ ಹೋಗಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ನೀವು ಬೇಕಾದರೆ ಸ್ವಂತ ಖರ್ಚಿನಲ್ಲಿ ಹೋಗಿ ಎಂದು ಹೇಳಿದ್ದೆ. ಸಚಿವರಾದ ಎಚ್. ಆಂಜನೇಯ ಮತ್ತು ರಾಮಲಿಂಗಾ ರೆಡ್ಡಿ ತಮ್ಮದೇ ವೆಚ್ಚದಲ್ಲಿ ಕುಟುಂಬ ಸಮೇತ ಹೋಗುತ್ತಿದ್ದಾರೆ. ಇದಕ್ಕೆ ನಮ್ಮದೇನೂ ಆಕ್ಷೇಪ ಇಲ್ಲ. ಅದೇ ರೀತಿ ಶಾಸಕರು ಬೇಕಾದರೆ ತಮ್ಮ ಖರ್ಚಿನಲ್ಲಿ ತೆರಳಬಹುದು ಎಂದು ಹೇಳಿದರು.
ಅಕ್ಕ ಸಮ್ಮೇಳನಕ್ಕೆ ಸರ್ಕಾರ ಎಷ್ಟು ಅನುದಾನ ನೀಡಿದೆ? ರು. 50 ಲಕ್ಷಲೋ, ರು.35 ಲಕ್ಷವೋ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ಸಮ್ಮೇಳನಕ್ಕೆ ಅನುದಾನ ನೀಡಿದೆ. ಆದರೆ ಅದು ಎಷ್ಟು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ ಎಂದು ಹೇಳಿದರು.
ಸಮನ್ವಯ ಸಮಿತಿಯಲ್ಲಿ ಸಂಪುಟ ವಿಸ್ತರಣೆ ಚರ್ಚೆ
ಈ ತಿಂಗಳು ನಡೆಯುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಭೆಯ ಅಜೆಂಡಾದಲ್ಲಿ ಈ ವಿಚಾರವನ್ನು ಸೇರಿಸಿಲ್ಲ. ಆದರೂ ನಾವು ಈ ಬಗ್ಗೆ ಚರ್ಚೆ ನಡೆಸುತ್ತೇವೆ. ನಿಗಮ -ಮಂಡಳಿ ನೇಮಕ ವಿಚಾರದ ಬಗ್ಗೆಯೂ ಮಾತನಾಡುತ್ತೇವೆ ಎಂದು ಹೇಳಿದರು.