ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನನ್ನಲ್ಲಿ ರಾಷ್ಟ್ರಭಕ್ತಿಯ ದೀಪ ಹಚ್ಚಿದ್ದು ಆರ್‌ಎಸ್‌ಎಸ್

ಪೊಲೀಸ್ ಅಧಿಕಾರಿಯಾಗಿ ನಿವೃತ್ತಿಯಾದ ಮೇಲೆ ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರಿಕೊಂಡೆ...

Mainashree
Updated On : 21 Aug 2014, 9:25 am

ಕನ್ನಡಪ್ರಭವಾರ್ತೆ, ಬೆಂಗಳೂರು,ಆ.20
ಪೊಲೀಸ್ ಅಧಿಕಾರಿಯಾಗಿ ನಿವೃತ್ತಿಯಾದ ಮೇಲೆ ರಾಷ್ಟ್ರೀಯ ಪಕ್ಷವೊಂದಕ್ಕೆ ಸೇರಿಕೊಂಡೆ. ಅಲ್ಲಿನ ನಾಯಕರು ಈತ ಸಂಘ ಪರಿವಾರದ ಹಿನ್ನೆಲೆಯುಳ್ಳವನು ಎಂದು ಅನುಮಾನದಿಂದ ನೋಡಲಾರಂಭಿಸಿದರು. ಅದೇ ಭಾವನೆಯನ್ನು ದೆಹಲಿ ನಾಯಕರಲ್ಲೂ ಮೂಡಿಸಿದರು. ಅವರೊಂದಿಗೆ ಗುದ್ದಾಡುವುದಕ್ಕಿಂತ ಪಕ್ಷ ಬಿಡುವುದೇ ಸೂಕ್ತ ಎಂದು ಆಗ ಪಕ್ಷ ಬಿಟ್ಟೆ ಎಂದು ನಿವೃತ್ತ ಡಿಐಜಿ ಶಂಕರಬಿದರಿ ಹೇಳಿದ್ದಾರೆ.

ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಬುಧವಾರ ಸೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

12ರಿಂದ 16ನೇ ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದೆ. ಬಾಗಲಕೋಟೆಯಲ್ಲಿ ಶೆಟ್ಟರ್, ನಿಪ್ಪಾಣಿಯಲ್ಲಿ ರಾನಡೆ, ಸಿದ್ದಣ್ಣ ದಗೆ ಸಂಘದಲ್ಲಿ ಪಾಠ ಮಾಡಿದ್ದಾರೆ. ಕನ್ಯಾಕುಮಾರಿಯಲ್ಲಿ ವಿವೇಕಾನಂದ ಪ್ರತಿಮೆ ಸ್ಥಾಪನೆಗೆ ಆ ಸಂದರ್ಭದಲ್ಲಿ ನಾನು 550 ರು. ದೇಣಿಗೆ ಸಂಗ್ರಹಿಸಿ ನೀಡಿದ್ದೇನೆ. ನನ್ನಲ್ಲಿ ರಾಷ್ಟ್ರಭಕ್ತಿಯ ದೀಪ ಹಚ್ಚಿದ್ದು ಆರ್‌ಎಸ್‌ಎಸ್ ಎಂದರು.

ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಂಧ ವ್ಯಕ್ತಿತ್ವ ಪ್ರಧಾನಿ ನರೇಂದ್ರ ಮೋದಿ ಅವರದು. ಕಳೆದ ವರ್ಷ ಅಕ್ಟೋಬರ್ 8ರಂದು ಬಿಜೆಪಿ ನೀಡಿದ್ದ ಆಹ್ವಾನವನ್ನು ನಾನು ಒಪ್ಪಿಕೊಳ್ಳಬೇಕಿತ್ತು. ರಾಜಕೀಯ ಅಪ್ರಬುದ್ಧತೆಯಿಂದ ನಾನು ಆಗ ಒಪ್ಪಿಕೊಳ್ಳಲಿಲ್ಲ. ತಳಮಟ್ಟದ ಹಂತದ ರಾಜಕೀಯ ನನಗೆ ಆಗ ಅರ್ಥವಾಗಿರಲಿಲ್ಲ. ರಾಜಕೀಯ ಪ್ರಬುದ್ಧತೆಯ ಕೊರತೆ ಮತ್ತು ಅನನುಭವಿಯಾಗಿದ್ದ ಕಾರಣಕ್ಕೆ ಕೆಲವು ರಾಜಕೀಯ ಪಕ್ಷ ಸೇರಿ ಹೊರಬಂದೆ. ಅದಕ್ಕೆಲ್ಲ ನಾನೇ ಹೊಣೆ. ಯಾರನ್ನೂ ನಾನು ದೂಷಿಸುವುದಿಲ್ಲ. ಇನ್ನು ಮುಂದೆ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬೇಷರತ್ತಾಗಿ ಬಿಜೆಪಿ ಸೇರಿದ್ದೇನೆ. ಯಾವ ಹುದ್ದೆಯನ್ನೂ ಕೇಳುವುದಿಲ್ಲ. ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಲು ಪಕ್ಷ ಸೇರಿದ್ದೇನೆ ಎಂದು ಬಿದರಿ ಸ್ಪಷ್ಟಪಡಿಸಿದರು.

ಅಧಿಕಾರ ಪಡೆಯಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. 42 ವರ್ಷಗಳ ಪೊಲೀಸ್ ಸೇವೆಚಯ ಸಂದರ್ಭದಲ್ಲಿ 20 ಬಾರಿ ಸಾವಿನ ದವಡೆಗೆ ಸಿಲುಕಿ ಪಾರಾಗಿ ಬಂದಿದ್ದೇನೆ. ಅದಕ್ಕೆ ದೈವ ಬಲವೇ ಕಾರಣ. ಈಗಿನ ನನ್ನ ಜೀವನ ಬೋನಸ್ ಎಂದರು.

ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಶಂಕರ ಬಿದರಿ ಅವರಿಂದ ಅನುಕೂಲವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement