ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಗುಡುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ 'ಮೋದಿ ಹಿಟ್ಲರ್ ರೀತಿ ಸರ್ವಾಧಿಕಾರಿ' ಎಂದಿದ್ದಾರೆ.
ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕ ಆಯೋಜಿಸಿದ್ದ ದಿ.ರಾಜೀವ್ ಗಾಂಧಿ ಹಾಗೂ ದಿ.ದೇವರಾಜ್ ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಮೂರೇ ತಿಂಗಳಲ್ಲಿ ಅಧಿಕಾರವನ್ನು ತಮ್ಮ ಕೈಯಲ್ಲಿ ಕೇಂದ್ರೀಕರಿಸುತ್ತಿದ್ದಾರೆ ಎಂದರು.
ಆರ್ಎಸ್ಎಸ್ನವರಿಗೆ ದೇಶದ ಸಂವೀಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಮೋದಿ ಸಂಪುಟದ ಮಂತ್ರಿಗಳಿಗೆ ಕೆಲಸವಿಲ್ಲ. ಎಲ್ಲವನ್ನೂ ಅಧಿಕಾರಿಗಳ ಮೂಲಕ ನಡೆಸುವ ಪರಂಪರೆಗೆ ಮುಂದಾಗಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಕೆಟ್ಟ ಕಾಲ ಕಾದಿದೆ ಎಂದರು.
ಮೋದಿ ಸುಳ್ಳನ್ನೇ ಪ್ರಬಲವಾಗಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಅವರಿಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ. ರಾಜೀವ್ ಗಾಂಧಿಯವರು ಅಧಿಕಾರದಲ್ಲಿ ಇದ್ದಾಗ ದೇಶದಲ್ಲಿ ಸಂಪರ್ಕ ಕ್ರಾಂತಿಯಾಯ್ತು, ಮೀಸಲು ನೀತಿ ಜಾರಿಗೆ ಬಂದಿತ್ತು. ಹಲವು ಔದ್ಯೋಗಿಕ ಕಾರ್ಯಕ್ರಮಗಳು ಜಾರಿಗೆ ಬಂದವು. ಆದರೆ ಇದ್ಯಾವುದೂ ಅವರಿಗೆ ಗೋಚರಿಸುತ್ತಿಲ್ಲ. ಹಿಟ್ಲರ್ ಕಾಲದಲ್ಲಿ ಸುಳ್ಳು ಹೇಳುವುದಕ್ಕೆ ಗೊಬೆಲ್ ಎಂಬ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. 100 ಬಾರಿ ಹೇಳಿದ ಸುಳ್ಳು ಸತ್ಯವಾಗುತ್ತದೆ ಎಂದು ಆತ ಪ್ರತಿಪಾದಿಸುತ್ತಿದ್ದ. ಅದೇ ರೀತಿ ಬಿಜೆಪಿಯವರು ಎಂದರು.