ತಪಾಸಣೆ ವೇಳೆ ಪೇದೆಗೆ ಶಾಸಕ ಭೈರತಿ ಸೋದರ ಧಮ್ಕಿ
ಬೆಂಗಳೂರು: ದ್ವಿಚಕ್ರ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಪೊಲೀಸ್ ಪೇದೆಗೆ ಶಾಸಕ ಭೈರತಿ ಬಸವರಾಜು ಸೋದರ ನಾಗೇಶ್ ಧಮ್ಕಿ ಹಾಕಿದ ಸಂಬಂಧ ಸಂಪಂಗಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನವನ್ನು ಪತ್ತೆ ಹಚ್ಚುವ ಸಲುವಾಗಿ ಟೆಲಿಕಾಂ ಲೇಔಟ್‌ನಲ್ಲಿ ಪೊಲೀಸರು ನಾಕಾ ಬಂದಿ ಮಾಡಿ ದ್ವಿಚಕ್ರ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಭೈರತಿ ಬಸವರಾಜು ಸೋದರ ನಾಗೇಶ್‌ರನ್ನು ತಡೆದ ಪೊಲೀಸರು ತಪಾಸಣೆಗೆ ಮುಂದಾದರು.
ಇದರಿಂದ ಆಕ್ರೋಶಗೊಂಡ ನಾಗೇಶ್ ನಾನು ಶಾಸಕ ಭೈರತಿ ಬಸವರಾಜು ಸೋದರ ನನ್ನನ್ನು ತಪಾಸಣೆ ಮಾಡೋದು ಬೇಡ ಎಂದ್ದಿದ್ದಾರೆ. ಆದರೆ ಪೇದೆ ಇಲ್ಲ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸುತ್ತಿದ್ದು, ತಾವು ಸಹಕರಿಸುವಂತೆ ಹೇಳಿದ್ದಾರೆ. ಇದಕ್ಕೆ ಮಣಿಯದ ನಾಗೇಶ್ ಪೇದೆಯ ಶರ್ಟ್ ಕಾಲರ್ ಹಿಡಿದು ಎಳೆದಾಡಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸ್ ಪೇದೆ ಶಿವಾನಂದ್ ಸಂಪಂಗಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನನ್ವಯ ನಾಗೇಶ್ ವಿರುದ್ಧ ಐಪಿಸಿ ಸೆಕ್ಷನ್ 353, 504 ಹಾಗೂ 506ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.