ಅನಾಥ ಸ್ಥಿತಿಯಲ್ಲಿ ಡಾ.ಜಿಸ್ಸೆಸ್ ಸಮಾಧಿ
ಸುಣ್ಣ ಬಳಿದ ಕಟ್ಟೆ... ಸುತ್ತ ಗಿಡಗಂಟಿಗಳ ರಾಶಿ... ಅಲ್ಲಿ ಹುಡಿಕಿದರೂ ಸಿಗದು ಹೆಸರು, ನಾಮಫಲಕ...
ಬೆಂಗಳೂರು: ಸುಣ್ಣ ಬಳಿದ ಕಟ್ಟೆ... ಸುತ್ತ ಗಿಡಗಂಟಿಗಳ ರಾಶಿ... ಅಲ್ಲಿ ಹುಡಿಕಿದರೂ ಸಿಗದು ಹೆಸರು, ನಾಮಫಲಕ... ಕಿತ್ತುಹೋದ ಮೇಲ್ಭಾಗ... ಇವು ಕಲಾಗ್ರಾಮದಲ್ಲಿರುವ ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪನವರ ಸಮಾಧಿಯ ಸ್ಥಿತಿ!
ಅಲ್ಲೇ ಹತ್ತಿರ ಈಗ ಅನಂತಮೂರ್ತಿ ಅವರ ಅಂತ್ಯ ಸಂಸ್ಕಾರವೂ ನಡೆದಿದೆ. ಈ ನೆಪದಲ್ಲಿ ಜಿ.ಎಸ್ ಶಿವರುದ್ರಪ್ಪ ಅವರ ಸಮಾಧಿಯ ಪರಿಸರ ಕೊಂಚ ಸ್ವಚ್ಛಗೊಂಡಿದೆ. ಇಲ್ಲವಾದಲ್ಲಿ ಶಿವರುದ್ರಪ್ಪ ಅವರ ಸಮಾಧಿ ನೋಡುವವರಿಗೂ ಗತಿ ಇರಲಿಲ್ಲ.
ವಿಶ್ವಮಾನ್ಯ ಕವಿ, ವಿಮರ್ಶಕ, ಚಿಂತಕ, ಸಾಹಿತ್ಯ- ಸಾಂಸ್ಕೃತಿಕ ರಾಯಭಾರಿ ಎಲ್ಲವೂ ಆಗಿದ್ದ ರಾಷ್ಟ್ರಕವಿ ಸಮಾಧಿಗೆ ಕನಿಷ್ಠ ಗೌರವ ಸಲ್ಲಿಸಲೂ ಸರ್ಕಾರ, ಅದರ ಅಧೀನ ಸಂಘ ಸಂಸ್ಥೆಗಳಾದ ಅಕಾಡೆಮಿ, ಪ್ರಾಧಿಕಾರ, ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾಲಯಗಳು ಆಸಕ್ತಿ ಹೊಂದಿಲ್ಲ ಎಂಬುದಕ್ಕೆ ಇದು ಸಾಕ್ಷಿ.
ಸೇತುವೆ-ಕಟ್ಟಡಗಳಿಗೆಲ್ಲ ಉದ್ಘಾಟಕರ ಹೆಸರು ಕೆತ್ತಿದ್ದ ಕಲ್ಲು ಹಾಕಿಸುವ ಸರ್ಕಾರ, ರಾಷ್ಟ್ರಕವಿಯ ಸಮಾಧಿ ಜಾಗದಲ್ಲಿ ಅಮೃತಶಿಲೆ ನೆಟ್ಟು ಹೆಸರು, ಜನನ-ನಿಧನ ದಿನಾಂಕ ಹಾಕುವುದನ್ನೂ ಮರೆತಿದೆ.
ರಿಂಗ್ ರೋಡಿನ ಮಲ್ಲತ್ತಹಳ್ಳಿಯ ಬಸ್ ನಿಲ್ದಾಣ ಪಕ್ಕವೇ ಬರುವ ಕಲಾಗ್ರಾಮದ ಮೇನ್‌ಗೇಟ್‌ನಲ್ಲೂ 'ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪ ಪುಣ್ಯಭೂಮಿ'ಗೆ ದಾರಿ ಎಂಬ ಯಾವುದೇ ನಾಮಫಲಕವೂ ಇಲ್ಲ. ಮೇನ್ ಗೇಟ್‌ನಿಂದ ಒಂದು ಕಿಲೋಮೀಟರ್ ತಗ್ಗಿಗೆ ಹೋದರೆ ಕುವೆಂಪು ಭಾಷಾ ಭಾರತಿ ಕಚೇರಿ ಸಿಗುತ್ತದೆ. ಅದರ ಹಿಂಭಾಗದಲ್ಲಿ ರಾಷ್ಟ್ರಕವಿಯ ಸಮಾಧಿ ಅನಾಥವಾಗಿದೆ. 'ಇದೇನಾ, ರಾಷ್ಟ್ರಕವಿ ಶಿವರುದ್ರಪ್ಪನವರ ಸಮಾಧಿ?' ಎಂದು ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಕೇಳಿ ಖಚಿತ ಪಡಿಸಿಕಕೊಳ್ಳಬೇಕಿದೆ. ಇನ್ನು ಸಾಂಪ್ರದಾಯಿಕ ಶಿಲ್ಪಗುರುಕುಲ ಕೇಂದ್ರಗಳ ವಿದ್ಯಾರ್ಥಿಗಳು, ಕೆಲಸಗಾರರು ತಮಗೇ ಗೊತ್ತಿಲ್ಲ ಅಂತಾರೆ.
ರಾಷ್ಟ್ರಕವಿ ನಿಧನರಾದಾಗ ಅವರ ಮನೆ-ಚೈತ್ರ, ರವೀಂದ್ರ ಕಲಾಕ್ಷೇತ್ರ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಹಸ್ರಾರು ಕವಿ, ಕಲಾವಿದರು, ಗಾಯಕರು, ಅಭಿಮಾನಿಗಳು, ಕಾವ್ಯಪ್ರಿಯರು ಸೇರಿ ಗೌರವ ಸಲ್ಲಿಸಿದ್ದರು. ರಾಜ್ಯಾದ್ಯಂತ ಎರಡು ದಿನಗಳ ಶೋಕಾಚರಣೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಕಲಾಗ್ರಾಮದಲ್ಲಿ ಶಿವರುದ್ರಪ್ಪನವರ ಅಪೇಕ್ಷೆಯಂತೆ ಮಣ್ಣು ಮಾಡದೆ ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಗಿತ್ತು.
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ, ಕಾಣದ ಕಡಲಿಗೇ ಹಂಬಲಿಸಿದೆ ಮನ, ಪ್ರೀತಿ ಇಲ್ಲದ ಮೇಲೆ, ಎದೆ ತುಂಬಿ ಹಾಡಿದೆನು, ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಮು, ಯಾವುದೀ ಪ್ರವಾಹವು, ಹಾಡು ಹಳೆಯದಾದರೇನು ಭಾವ ನವನವೀನ- ಇಂಧ ಅದ್ಭುತ ಕವಿತೆ, ಭಾವಗೀತೆಗಳ ಮೂಲಕ ರಾಷ್ಟ್ರಕವಿ ಹೆಸರಾದವರು.
ರಾಷ್ಟ್ರಕವಿಗೆ ಏಕಿಲ್ಲ ಗೌರವ?
ಮಲ್ಲತಹಳ್ಳಿಯ ಕಲಾಗ್ರಾಮದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ಡಾ.ರಾಜ್‌ಕುಮಾರ್ ಸಮಾಧಿ ಇದೆ. ಸರ್ಕಾರ ಸ್ಮಾರಕ ಯೋಜನೆ ಹಾಕಿಕೊಂಡು ರು.10ಕೋಟಿ ಬಿಡುಗಡೆ ಮಾಡಿ ಅದನ್ನು ಪ್ರವಾಸಿ ತಾಣ ಮಾಡಿದೆ. ಸಿನಿಮಾ ಮೇಲು ಪ್ರತಿಭೆಯ ಸಮಾಧಿಗೆ ಸಂದ ಗೌರವ ಇಂಥ ರಾಷ್ಟ್ರಕವಿಗೆ ಏಕಿಲ್ಲ ಎಂಬ ಪ್ರಶ್ನೆ ಉದ್ಧವಿಸುತ್ತದೆ. ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಮನೆಯನ್ನೂ ಸರ್ಕಾರ ಮುತವರ್ಜಿ ವಹಿಸಿ ಸ್ಮಾರಕವಾಗಿಸಿದೆ. ಮತ್ತೊಬ್ಬ ರಾಷ್ಟ್ರಕವಿಯಾದ ಗೋವಿಂದ ಪೈ ಅವರಿಗೆ ಸಂಶೋಧನಾ ಕೇಂದ್ರ, ಟ್ರಸ್ಟ್‌ಗಳು ಹುಟ್ಟಿಕೊಂಡಿವೆ. ಆದರೆ 3ನೇ ರಾಷ್ಟ್ರಕವಿ ಶಿವರುದ್ರಪ್ಪ ಅವರ ನೆನಪನ್ನು ಚಿತಸ್ಥಾಯಿಗೊಳಿಸಲು ಯಾವ ಸಂಘ-ಸಂಸ್ಥೆಗಳೂ ಹುಟ್ಟಿಕೊಂಡಿಲ್ಲ! ಹೀಗೆ ಮುಂದುವರಿದರೆ ಹೊಸ ತಲೆಮಾರಿಗೆ ಇದು ರಾಷ್ಟ್ರಕವಿಯ ಸಮಾಧಿ ಎನ್ನಲು ಯಾವುದೇ ಕುರುಹು ಉಳಿಯಲಿಕ್ಕಿಲ್ಲ.
-ಕಗ್ಗೆರೆ ಪ್ರಕಾಶ್