ವಿಶೇಷ ವರದಿ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಶ್ರಾವಣದ 4ನೇ ಶನಿವಾರದ ಶುಭದಿನದಂದು ಹಾಸನ ಮತಬಾಂಧವರ ಋಣ ತೀರಿಸುವ ನೆಪದಲ್ಲಿ ಅಲ್ಲೇ ನೆಲೆಸಲು ಬೆಂಗಳೂರಿನ ಪದ್ಮನಾಭನಗರದಿಂದ ಹಾಸನಕ್ಕೆ ವಾಸ್ತವ್ಯ ಬದಲಾಯಿಸಿದ್ದಾರೆ. ಇದು ಗೌಡರ ವೈಯಕ್ತಿಕ ನಿರ್ಧಾರವಲ್ಲ, ಎಚ್ಡಿಕೆಯ 'ಒಳಸಂಚೇ' ಕಾರಣ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿ ಜಾತ್ಯತೀತ ಜನತಾದಳ ಅಧಿಕಾರದ ಗದ್ದುಗೆ ಏರುವಂತೆ ಮಾಡುತ್ತೇನೆ ಎಂಬ ದೃಢ ನಿರ್ಧಾರ ಕೈಗೊಂಡಿದ್ದ ಅವರೇ ಗೌಗಡರು ಇದೀಗ ತಮ್ಮನ್ನು ಸಂಸದನ್ನಾಗಿ ನಾಲ್ಕು ಬಾರಿ ಆಯ್ಕೆ ಮಾಡಿದ ಹಾಸನ ಜನತೆಯ ಋಣ ತೀರಿಸಲು ಹೊರಟಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬರುವವರೆಗೂ ವಿಶ್ರಮಿಸುವುದಿಲ್ಲ ಎಂದಿದ್ದ ಗೌಡರ ನಿರ್ಧಾರ ಅನುಮಾನ, ಗೊಂದಲಗಳನ್ನು ಸೃಷ್ಟಿಸಿದೆ.
ಗೌಡರ ಈ ತೀರ್ಮಾನಕ್ಕೆ ಪಕ್ಷದಲ್ಲಿನ ಸಾಕಷ್ಟು ಅಸಮಾಧಾನಗಳು, ನಾಯಕರಲ್ಲಿರುವ ವೈಮನಸ್ಯಕ್ಕೆ ಪರಿಹಾರ ಕಂಡುಕೊಳ್ಳುವ ದಾರಿ ದುರ್ಗಮವಾಗಿರುವುದು ಕಾರಣ ಎನ್ನಲಾಗಿದೆ.
ಕೆಲವು ಶಾಸಕರು ದೇವೇಗೌಡರ ದಾತ್ರಿಣ್ಯಕ್ಕಾಗಿ ಪಕ್ಷದಲ್ಲೇ ಉಳಿಯುವ ಮಾತನಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನವಿದೆ. ಎಚ್ಡಿಕೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವುದು ದತ್ತ ಸೇರಿದಂತೆ ಬಹುತೇಕ ಶಾಸಕರನ್ನು ಕೆರಳಿಸಿದೆ. ಎಚ್.ಡಿ ರೇವಣ್ಣ ಕೂಡ ಈ ವಿಷಯವನ್ನು ಅಪ್ಪನ ಬಳಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ತಿಳಿಹೇಳೋಣ ಎಂದರೆ ಎಚ್ಡಿಕೆ ಅವರ ಮಾತನ್ನೇ ಕೇಳುತ್ತಿಲ್ಲ.