ಪ್ರದೀಪ್ ಆತ್ಮಹತ್ಯೆಗೆ ಪೊಲೀಸ್ ಕಿರುಕುಳ ಕಾರಣ:ತನಿಖಾ ವರದಿ
ಕೆ.ಜಿ ನಗರದ ಲಕ್ಷ್ಮೀಪುರದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಕ್ಯಾಬ್ ಚಾಲಕ...
ಬೆಂಗಳೂರು: ಕೆ.ಜಿ ನಗರದ ಲಕ್ಷ್ಮೀಪುರದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಕ್ಯಾಬ್ ಚಾಲಕ ಪ್ರದೀಪ್ ಕುಮಾರ್ ಪ್ರಕರಣ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಸೇಪಟ್ ಇಲಾಖೆಯ ತನಿಖಾ ವರದಿಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರಿಗೆ ನೀಡಲಾಗಿದೆ.
ಪ್ರಾಥಮಿಕ ತನಿಖೆ ವೇಳೆ ಠಾಣೆ ಸಿಬ್ಬಂದಿ ಪ್ರದೀಪ್‌ಗೆ ಕಿರುಕುಳ ನೀಡಿರುವುದು ಕಂಡುಬಂದಿದೆ ಎಂದು ಮೂಲಗಳುತಿಳಿಸಿವೆ. ಒಟ್ಟು 60 ಪುಟಗಳ ವರದಿ ಸಲ್ಲಿಕೆಯಾಗಿದ್ದು, ಸಂಪೂರ್ಣವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಲೋಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಂಪೇಗೌಡ ನಗರದ ಲಕ್ಷ್ಮಿಪುರದಲ್ಲಿ ಪೊಲೀಸ್ ಕಿರುಕುಳ ತಾಳದೆ ಕ್ಯಾಬ್ ಚಾಲಕ ಪ್ರದೀಪ್ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದನು. ರೊಚ್ಚಿಗೆದ್ದ ಸ್ಥಳೀಯ ಪ್ರತಿಭಟನಾಕಾರರು ಪೊಲೀಸ್ ವಾಹನ ಚೀತಾಗೆ ಬೆಂಕಿ ಹಚ್ಚಿದ್ದರು.
ಗವಿಗಂಗಾಧರೇಶ್ವರ ದೇವಸ್ಥಾನ ಸಮೀಪದ ಲಕ್ಷ್ಮೀಪುರ 4ನೇ ಕ್ರಾಸ್ ನಿವಾಸಿ ಪ್ರದೀಪ್(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಶನಿವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜೆ ವೇಳೆಗೆ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ದಿನ ರಾತ್ರಿ ಪ್ರದೀಪ್‌ನನ್ನು ಠಾಣೆಯಲ್ಲಿ ಇಟ್ಟುಕೊಂಡು ಕಿರುಕುಳ ನೀಡಿದ್ದಾರೆ, ನಂತರ ರು.15 ಸಾವಿರ ಹಣ ಪಡೆದು ಆತನನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿ ಮೃತನ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ಡಿಸಿಪಿ ರೋಹಿಣಿ ಸೇಪಟ್ ಸಲ್ಲಿಸಿರುವ ತನಿಖಾ ವರದಿಯಲ್ಲಿ ಕೆಂಪೇಗೌಡ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಡಿ ನಾಗರಾಜು ಅವರು ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.
ಘಟನೆಯ ವಿವರ: ಪುಟ್ಟಸ್ವಾಮಿ ಎಂಬುವವರ ಬಳಿ ಪ್ರದೀಪ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆಗಸ್ಟ್ 20ರಂದು ರಾತ್ರಿ ಮದ್ಯಸೇವಿಸಿ ಬಂದಿದ್ದ ಆತ, ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಮಹಿಳೆಯ ಮನೆ ಬಾಗಿಲು ತಟ್ಟಿದ್ದಾನೆ. ಆಕೆ ಬಾಗಿಲು ತೆರೆಯಲು ನಿರಾಕರಿಸಿದ ಕಾರಣ ರಸ್ತೆಯಲ್ಲೇ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸಿ, ತನ್ನ ಜತೆ ಲೈಂಗಿಕ ಕ್ರಿಯೆ ನಡೆಸುವಂತೆ ಬಹಿರಂಗವಾಗಿ ಕೂಗಾಡಿದ್ದಾನೆ.
ಅಷ್ಟರಲ್ಲಿ ಆ ಮಹಿಳೆ ತನ್ನ ಪತಿಗೆ ಕರೆ ಮಾಡಿ ವಿಷಯ ಹೇಳಿ ಮನೆಗೆ ಬರುವಂತೆ ತಿಳಿಸಿದ್ದಾಳೆ. ನಂತರ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ, ಆತನ ವರ್ತನೆಯಿಂದ ತಮಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.
ಶಂಕರೇಗೌಡ ಎಂಬ ಪೊಲೀಸ್ ಪೇದೆ ಸ್ಥಳಕ್ಕಾಗಮಿಸಿ ಗಲಾಟೆ ಮಾಡುತ್ತಿದ್ದ ಪ್ರದೀಪ್‌ನನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಪ್ರದೀಪ್ ಪೇದೆ ಕೊರಳಪಟ್ಟಿ ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ. ನಂತರ ಮಾತಿನ ಚಕಮಕಿ ನಡೆದು, ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಮಾರ್ಗಮಧ್ಯದಲ್ಲಿ ಬೈಕ್‌ನಲ್ಲಿ ಕುಳಿತಿದ್ದ ಪ್ರದೀಪ್, ಪೇದೆಯನ್ನು ತಳ್ಳಿ ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ. ಆತನನ್ನು ಬಂಧಿಸಿ ವೈದ್ಯ ಪರೀಕ್ಷೆಗೊಳಪಡಿಸಿದ ಪೊಲೀಸರು, ನಿಂದನೆಗೊಳಗಾದ ಮಹಿಳೆಯಿಂದ ದೂರು ಸ್ವೀಕರಿಸಿದ್ದರು. ಸುದ್ದಿ ತಿಳಿದು ಅಲ್ಲಿಗೆ ಬಂದ ಆತನ ತಂದೆ ಈರಣ್ಣ, ಮಗನ ವರ್ತನೆಯಿಂದ ಬೇಸತ್ತಿದ್ದು, ಜೈಲಿಗೆ ಕಳುಹಿಸುವಂತೆ ತಿಳಿಸಿದ್ದಾರೆ. ನಂತರ ಆತನ ಸ್ನೇಹಿತರು ಬಿಡುಗಡೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಆ.22ರಂದು ಬಾಡಿಗೆದಾರರು ದೂರು ಹಿಂಪಡೆದು ರಾಜಿ ಮಾಡಿಕೊಳ್ಳುವುದಾಗಿ ಹೇಳಿದ ನಂತರ ಪೊಲೀಸರು ಪ್ರದೀಪ್‌ನನ್ನು ಬಿಡುಗಡೆ ಮಾಡಿದ್ದಾರೆ. ಮನೆಗೆ ಬಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು.
ಅಮಾನತು
ದೂರು ನೀಡಿದ ನಂತರವೂ ಪ್ರದೀಪ್‌ನನ್ನು 3 ದಿನ ಅಕ್ರಮವಾಗಿಟ್ಟುಕೊಂಡು ಹಣ ಪಡೆದ ಆರೋಪದ ಮೇಲೆ ಕೆಂಪೇಗೌಡ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಡಿ ನಾಗರಾಜು ಅವರನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಲು ಸೂಚಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ತಿಳಿಸಿದ್ದರು.