ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಲಕ್ಷ್ಮೀಪುರ ಘಟನೆ: ಇನ್ಸ್‌ಪೆಕ್ಟರ್, ಪೇದೆಗಳ ವಿರುದ್ದ ಕ್ರಿಮಿನಲ್ ಕೇಸ್

ಪೊಲೀಸ್ ಕಿರುಕುಳ ತಾಳದೆ ಲಕ್ಷ್ಮೀಪುರ ಕ್ಯಾಬ್ ಚಾಲಕ ಪ್ರದೀಪ್ ಆತ್ಮಹತ್ಯೆ...

Mainashree
Updated On : 27 Aug 2014, 8:46 am

ಬೆಂಗಳೂರು: ಪೊಲೀಸ್ ಕಿರುಕುಳ ತಾಳದೆ ಲಕ್ಷ್ಮೀಪುರ ಕ್ಯಾಬ್ ಚಾಲಕ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇದೆ ಪ್ರತಾಪ್ ಹಾಗೂ ಮಂಜುನಾಥ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಪೊಲೀಸರ ದೌರ್ಜನ್ಯದಿಂದಲೇ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಗ್ನೇಯ ವಿಭಾಗ ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪಟ್ ಅವರು ಸೋಮವಾರ 60 ಪುಟಗಳುಳ್ಳ ತನಿಖಾ ವರದಿಯನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದರು. ವರದಿ ಪರಿಶೀಲಿಸಿದ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರು ಇನ್ಸ್‌ಪೆಕ್ಟರ್ ಮತ್ತು ಪೇದೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಮಂಗಳವಾರ ಆದೇಶಿಸಿದ್ದಾರೆ.

ಆಯುಕ್ತರು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಡಿಸಿಪಿ ರೋಹಿಣಿ ಅವರು ಐಪಿಸಿ ಕಾಯ್ದೆ 306 (ಆತ್ಮಹತ್ಯೆಗೆ ಪ್ರಚೋದನೆ), 342 ಅಕ್ರಮ ಬಂಧನ , 324 ಹಲ್ಲೆ ಅಡಿ ದೂರು ದಾಖಲಿಸಿದ್ದಾರೆ. ಆದರೆ, ಕ್ರಿಮಿನಲ್ ಕೇಸ್ ದಾಖಲಾಗುತ್ತಿದ್ದಂತೆ ಬಂಧನದ ಭೀತಿಗೆ ಒಳಗಾದ ಆರೋಪಿತ ಇನ್ಸ್‌ಪೆಕ್ಟರ್ ಮತ್ತು ಪೇದೆಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರದೀಪ್‌ನನ್ನು ಠಾಣೆಗೆ ಕರೆತಂದ ಇನ್ಸ್‌ಪೆಕ್ಟರ್ ನಾಗರಾಜ್, ಇಬ್ಬರು ಪೇದೆಗಳು 3 ದಿನಗಳ ಕಾಲ ಅಕ್ರಮ ಬಂಧನಲ್ಲಿಟ್ಟುಕೊಂಡು ದೌರ್ಜನ್ಯ ಎಸಗಿರುವುದು, ರು.15 ಸಾವಿರ ಹಣ ಪಡೆದಿರುವುದು ವರದಿಯಿಂದ ಖಚಿತವಾಗಿದೆ ಎಂದು ಡಿಸಿಪಿ ವರದಿಯಲ್ಲಿ ತಿಳಿಸಿದ್ದಾರೆ.

ವಿಡಿಯೋ ಲಭ್ಯ

ಕೆಲ ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಮೃತನ ತಂದೆ ಈರಣ್ಣ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಸಿ.ಡಿ ನಾಗರಾಜು ಸಂಧಾನ ಮಾತುಕತೆಗೆ ಸಂಬಂಧಿಸಿದ ಐದೂವರೆ ನಿಮಿಷಗಳ ವಿಡಿಯೋ ಚಿತ್ರೀಕರಣ ಮಾಧ್ಯಮಗಳಿಗೆ ಲಭ್ಯವಾಗಿದೆ.

ಆ.10ರ ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದ ಪ್ರದೀಪ್ ಕುಡಿದ ಮತ್ತಿನಲ್ಲಿ ತಮ್ಮ ಮನೆಯ 1ನೇ ಮಹಡಿಯಲ್ಲಿ ನೆಲೆಸಿದ್ದ ಬಾಡಿಗೆದಾರರ ಮನೆ ಬಾಗಿಲು ತಟ್ಟಿದ್ದಾನೆ. ಒಂಟಿಯಾಗಿದ್ದ ಮಹಿಳೆ ಜತೆ ಕಸ ಹಾಕಿದ ವಿಚಾರಕ್ಕೆ ಜಗಳವಾಡಿ, ಅವಾಚ್ಯ ಶಬ್ದಳಿಂದ ನಿಂದಿಸಿದ್ದಾನೆ. ನಂತರ ಆಕೆ ಪತಿಗೆ ಕರೆ ಮಾಡಿ ಮನೆಗೆ ಕರೆಸಿದ್ದಾರೆ. ನಂತರ ದಂಪತಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರದೀಪ್‌ನನ್ನು ವಶಕ್ಕೆ ತೆಗೆದುಕೊಂಡು ಆತನ ತಂದೆ ಈರಣ್ಣ, ದೂರುದಾರರನ್ನು ಠಾಣೆಗೆ ಕರೆಸಿ ಸಂಧಾನ ನಡೆಸಿದ್ದರು. ಅಡ್ವಾನ್ಸ್ ಹಣ ವಾಪಸ್ ಕೊಟ್ಟರೆ ಮನೆ ಖಾಲಿ ಮಾಡುವುದಾಗಿ ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ತಕ್ಷಣ ಹಣ ನೀಡಲು ಸಾಧ್ಯವಿಲ್ಲ ಎಂದು ಈರಣ್ಣ ತಿಳಿಸಿದ್ದಾರೆ. ಮಗ ಹಾಳಾಗಿದ್ದಾನೆ, ದೂರು ದಾಖಲಿಸುವುದು ಬೇಡ. ಒಂದು ಅವಕಾಶ ಕೊಡಿ. ಬುದ್ಧಿ ಕಲಿಯದಿದ್ದಲ್ಲಿ ಮುಂದಿನ ಕ್ರಮಕೈಗೊಳ್ಳಿ ಎಂದು ಈರಣ್ಣ ಇನ್ಸ್‌ಪೆಕ್ಟ್‌ರ್‌ಗೆ ಮನವಿ ಮಾಡಿದ್ದಾರೆ. ಹಾಗಾಗಿ ದೂರು ದಾಖಳಿಸದೆ ಪ್ರದೀಪ್‌ನನ್ನು ಠಾಣೆಯಲ್ಲಿರಿಸಿಕೊಂಡಿದ್ದರು ಎಂದು ಹೆಸರು ಹೇಳಲಿಚ್ಚಿಸದ ಕೆ.ಜಿ.ನಗರ ಠಾಣೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement