ಮುಂದಿನ ವರ್ಷಾಂತ್ಯಕ್ಕೆ ಒತ್ತುವರಿ ತೆರವು
ರಾಜ್ಯದಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಭೂಮಿಯಲ್ಲಿ 1.36ಲಕ್ಷ ಎಕರೆ ಪ್ರದೇಶವನ್ನು 2015ರ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಆ.27
ರಾಜ್ಯದಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಭೂಮಿಯಲ್ಲಿ 1.36ಲಕ್ಷ ಎಕರೆ ಪ್ರದೇಶವನ್ನು 2015ರ ಡಿಸೆಂಬರ್ ಒಳಗೆ ತೆರವುಗೊಳಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.
ರಾಜ್ಯದಲ್ಲಿ ಒಟ್ಟಾರೆ 11 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿ ಆಗಿದ್ದು, ಸರ್ಕಾರ ಒತ್ತುವರಿ ತೆರವುಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಮಾಜ ಪರಿವರ್ತನ ಸಮುದಾಯ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಳಿಸಿದ್ದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಮೂರ್ತಿ ಡಿ.ಎಚ್ ವಘೇಲಾ ಅವರಿದ್ದ ವಿಭಾಗೀಯ ಪೀಠ, ಸರ್ಕಾರಿ ಜಮೀನು ಒತ್ತುವರಿ ಶೀಘ್ರ ತೆರವುಗೊಳಿಸಲು ಸರ್ಕಾರಕ್ಕೆ ಭೂ ಕಂದಾಯ ತಜ್ಞರ ಸಲಹೆ ಅತ್ಯಗತ್ಯ. ಇವನರ್ನು ನೇಮಕ ಮಾಡುವ ಕುರಿತು ಚರ್ಚಿಸಿ ಮುಂದಿನ ವಿಚಾರಣೆಯೊಳಗೆ ಈ ಸಂಬಂಧ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಪ್ರಕರಣ ಹಿನ್ನೆಲೆ: ಸರ್ಕಾರದ ಭೂಮಿ ಒತ್ತುವರಿಯಾಗಿರುವ ಕುರಿತು ರಾಜ್ಯ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಬಾಲಸುಬ್ರಮಣಿಯನ್ ಅವರ ನೇತೃತ್ವದ ಸಮಿತಿ ವರದಿ ನೀಡಿತ್ತು. ವರದಿ ಅನ್ವಯ ರಾಜ್ಯಾದ್ಯಂತ ಸುಮಾರು 11 ಲಕ್ಷ ಎಕರೆಗಿಂತ ಅಧಿಕ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಬೆಂಗಳೂರು ಒಂದರಲ್ಲೇ ಸುಮಾರು 47 ಸಾವಿರ ಎಕರೆ ಸರ್ಕಾರಿ ಭೂಮಿ ಒತ್ತುವರಿ ಆಗಿರುವುದಾಗಿ ವರದಿ ಸಲ್ಲಿಸಿದ್ದರು.
ಇದನ್ನು ತೆರವುಗೊಳಿಸುವಂತೆ ಸಮಿತಿ ಶಿಫಾರಸ್ಸು ಮಾಡಿತ್ತು. ಆದರೆ ತೆರವುಗೊಳಿಸುವ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಿದೆ. ಈ ವರದಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಮಾಜ ಪರಿವರ್ತನಾ ಸಮುದಾಯ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸರ್ಕಾರ ಹೇಳಿದ್ದೇನು?
ಅರ್ಜಿ ವಿಚಾರಣೆ ವೇಳೆ, ಸರ್ಕಾರ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಮಟ್ಟದಲ್ಲಿ ಕಾರ್ಯಪಡೆ ರಚಿಸಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದೆ. ಜಿಲ್ಲಾಧಿಕಾರಿಗಳನ್ನು ಕಾರ್ಯ ಪಡೆ ಮುಖ್ಯಸ್ಥರನ್ನಾಗಿ, ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ಉಪಾಧ್ಯರಾಗಿ, ಎಸಿಯವರನ್ನು ಸಮನ್ವಯ ಅಧಿಕಾರಿಯಾಗಿ, ತಹಸೀಲ್ದಾರ್‌ರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಸರ್ಕಾರಿ ಭೂಮಿ ತೆರವುಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಸರ್ಕಾರದ ನಿರ್ದೇಶನ ಉಲ್ಲಂಘಿಸಿದರೆ ಕಾರ್ಯ ಪಡೆಯ ಮುಖ್ಯಸ್ಥರು ಸೇರಿದಂತೆ ಸದಸ್ಯರನ್ನು ನೇರ ಜವಾಬ್ದಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಹೈಕೋರ್ಟ್‌ಗೆ ತನ್ನ ವರದಿ ಸಲ್ಲಿಸಿದೆ.