ಪಕ್ಷ ಬಿಡಲಾರೆ ಶಾಸಕ ಚಲುವರಾಯಸ್ವಾಮಿ ಸ್ಪಷ್ಟನೆ
ಬೆಂಗಳೂರು: ಕೆಲವು ತಪ್ಪು ನಿರ್ಧಾರಗಳಿಂದ ಪಕ್ಷಕ್ಕೆ ಹಿನ್ನೆಡೆಯಾಗಿರುವುದು ನಿಜ. ಅದನ್ನೆಲ್ಲ ಸರಿಪಡಿಸುತ್ತೇವೆ. ದೇವೇಗೌಡರದ್ದು ಖಡಕ್ ತೀರ್ಮಾನಗಳು. ಕೆಲವು ತೀರ್ಮಾನಗಳು ಪಾಲನೆಯಾಗಿಲ್ಲ ಎಂಬ ಭಾವನೆ ಇರಬಹುದು.
ಹೇಗೆ ಮುಂದುವರಿಯಬೇಕು, ಅಧಿಕಾರಕ್ಕೆ ಬರಬೇಕು, ಸಂಘಟನೆ ಮಾಡಬೇಕು ಎಂಬ ಬಗ್ಗೆ ಆಂತಕ ಇದೆ. ಸಂಘಟನೆಯಿಂದ ಸಂಖ್ಯೆ ಹೆಚ್ಚಿಸಿಕೊಳ್ಳಬೇಕಿದೆ. ಏಕಪಕ್ಷವಾಗಿ ಅಧಿಕಾರ ಹಿಡಿಯಬೇಕಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ನಮ್ಮ ನಾಯಕರು, ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ... ಒಂದೇ ವೇದಿಕೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಭಿನ್ನ ಹೇಳಿಕೆಗಳನ್ನು, ತೀರ್ಮಾನಗಳನ್ನು ಹೇಳವುದರಿಂದ ಕೆಲವು ಬಾರಿ ಗೊಂದಲ ಉಂಟಾಗುತ್ತದೆ.
ಎಲ್ಲ ಪಕ್ಷಗಳಲ್ಲೂ ಇಂತಹ ಸಂದರ್ಭಗಳಲ್ಲಿರುತ್ತವೆ. ಆದರೆ ಇಲ್ಲಿ ಅಪ್ಪ-ಮಕ್ಕಳಲ್ಲೇ ಭಿನ್ನಾಭಿಪ್ರಾಯ ಎಂಬುದು ಪ್ರಾಮುಖ್ಯ ಪಡೆಯುತ್ತದೆ. ಅದೆಲ್ಲವನ್ನೂ ಸರಿಪಡಿಸಿಕೊಂಡು ಹೋಗಲಾಗುತ್ತದೆ. ದೇವೇಗೌಡರು ಬೆಂಗಳೂರಿನಲ್ಲಿ ಇದ್ದುಕೊಂಡೇ ರಾಜಕೀಯ ಅಥವಾ ಪಕ್ಷ ಸಂಘಟಿಸಬೇಕಿಲ್ಲ ಅವರು ಎಲ್ಲಿದ್ದರೂ ಆ ಕೆಲಸ ಮಾಡುತ್ತಾರೆ. ದೇವೇಗೌಡರು ನಮ್ಮ ಪ್ರಶ್ನಾತೀತ ನಾಯಕರು...ಜೆಡಿಎಸ್ನಿಂದ ಒಂದು ಕಾಲು ಹೊರಗಿಟ್ಟಿರುವ ಶಾಸಕರ ನಾಯಕ ಚಲುವರಾಯಸ್ವಾಮಿ ಅವರ ಮಾತುಗಳಿವು. ದೇವೇಗೌಡರು ನಿಷ್ಠೆ ಇಲ್ಲದಿದ್ದರೆ ಪಕ್ಷದಿಂದ ಹೊರಹೋಗಿ ಎಂದು ಪರೋಕ್ಷವಾಗಿ ನನಗೇ ಹೇಳಿದ್ದಾರೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ದೇವೇಗೌಡರನ್ನು ಖುದ್ದಾಗಿ ಭೇಟಿ ಮಾಡಿ ಎಲ್ಲವನ್ನೂ ವಿವರಿಸಬೇಕಾದ ಅಗತ್ಯ ಇಲ್ಲ ಎಂದು ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ನುಡಿದರು.
ಚಲುವರಾಯಸ್ವಾಮಿ ಮಾತುಗಳು ಹೀಗಿದ್ದವು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ಒಕ್ಕಲಿಗರ ಹೊರತಾದ ನಾಯಕರಿಗೆ ಈ ಹುದ್ದೆಯನ್ನು ನೀಡಬೇಕೆಂದು ಹಿಂದೆಯೂ ಹೇಳಿದ್ದೆ. ಈಗಲೂ ಅದಕ್ಕೆ ಬದ್ಧ. ಜೆಡಿಎಸ್ ಒಂದು ಸಮುದಾಯದ ಪಕ್ಷ ಎಂದು ಮತ್ತೆ ಎಲ್ಲರೂ ಹೇಳುತ್ತಾರೆ. ಇತರೆ ವರ್ಗದ ನಾಯಕರಿಗೂ ಅವಕಾಶ ಮಾಡಿಕೊಂಡಬೇಕಾಗಿದೆ.
1994ರಲ್ಲಿ ತಾಲೂಕು ಪಂಚಾಯಿತಿಯಲ್ಲಿ ಗೆಟ್ಔಟ್ ಎಂದು ಗೌಡರು ಹೇಳಿದಾಗಲೇ ಪಕ್ಷ ಬಿಟ್ಟು ಹೋಗಬಹುದಿತ್ತು. ಅಲ್ಲದೆ ಪ್ರಧಾನಿಯಾಗಿದ್ದಾಗ ಶಿವರಾಮೇಗೌಡರನ್ನು ಬೆಂಬಲಿಸು ಎಂದಾಗ ಇಲ್ಲ ಎಂದು ಹೋರಾಡಿದೆನೇ ಹೊರತು ಪಕ್ಷದಿಂದ ಹೊರಹೋಗಲಿಲ್ಲ. ಸಿದ್ದರಾಮಯ್ಯ ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾಗ, ಮಂತ್ರಿಯಾದಾಗಿನಿಂದ ಆತ್ಮೀಯರು. ಪಕ್ಷ ಬೇರೆಯಾದರೆ ವಿಶ್ವಾಸ ಇರಬಾರದೆಂದೇನೂ ಇಲ್ಲ. ಮಂಡ್ಯದಲ್ಲಿ ಜೆಡಿಎಸ್ ಗೆಲವು ಕಾಂಗ್ರೆಸ್ ನಾಯಕರ ಕಿತ್ತಾಟದಿಂದ ಬಂದಿದೆ ಎಂಬ ಗೌಡರ ಹೇಳಿಕೆ ಬಗ್ಗೆ ಅಸಮಾಧಾನ ಇದೆ. ಕುಮಾರಸ್ವಾಮಿ ಅವರ ಗೆಳೆತನ ಹಿಂದಿನಂತೆಯೇ ಇದೆ.