ಬೆಲೆ ಏರಿಕೆ ನಡುವೆಯೂ ಹಬ್ಬದ ಸಡಗರ
ಬೆಂಗಳೂರು: ನಗರದಲ್ಲಿ ಗುರುವಾರ ಗೌರಿ ಹಬ್ಬದ ಸಡಗರ. ಶುಕ್ರವಾರ ಗಣೇಶನ ಹಬ್ಬಕ್ಕೆ ಸಜ್ಜಾಗುವ ಸಿದ್ಧತೆ. ಗೌರಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ ನಾಗರಿಕರು ಅದರ ಜತೆಗೆ ಗಣಪತಿ ಆಗಮನಕ್ಕೂ ಸಕಲ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಬೆಲೆ ಏರಿಕೆಯ ನಡುವೆಯೂ ಹಬ್ಬದ ಸಡಗರ ಹೆಚ್ಚಾಗಿತ್ತು.
ಗೌರಿ ಹಬ್ಬದಂದು ಸುಮಂಗಲಿಯರು ವಿಶೇಷವಾಗಿ ಹೂವು ಹಾಗೂ ಆಭರಣಗಳಿಂದ ದೇವಿ ಕಲಶವನ್ನು ಅರಂಕಾರ ಮಾಡಿ ಪೂಜೆ ಸಲ್ಲಿಸಿದ್ದರು. ಸಾಮಾನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜತೆಗೆ ಕಲಶ, ಗೌರಿದಾರ, ಹತ್ತಿ ಎಳೆ, ಬಳೆ, ಜೊತೆ ಮೊರದ ಬಾಗಿನವನ್ನು ಗೌರಿಗೆ ಅರ್ಪಿಸಲಾಯಿತು. ಕುಟುಂಬದ ಸದಸ್ಯರೆಲ್ಲಾ ಒಟ್ಟು ಗೂಡಿ ಹಬ್ಬವನ್ನು ಆಚರಿಸಿದರು. ಸುಮಂಗಲಿಯರು ಬೆಳಗ್ಗೆಯೇ ಮನೆಗಳಲ್ಲಿ ಪೂಜೆ ನೆರವೇರಿಸಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ಬೆಲೆ ಹೆಚ್ಚಾಗಿದ್ದರೂ ಸಹ ಲೆಕ್ಕಿಸದೆ ಮಹಿಳೆಯರು ತೆರಳಿ ಹಣ್ಣುಗಳನ್ನು ಖರೀದಿಸಿ ಹಬ್ಬವನ್ನು ಆಚರಿಸಿದ್ದು ದೇವರ ಮೇಲಿನ ಭಕ್ತಿಯನ್ನು ಬಿಂಬಿಸುತ್ತಿತ್ತು. ನಗರದೆಲ್ಲೆಡೆ ಮೊದಲು ಗಣಪತಿಗೆ ಪೂಜೆ ಮಾಡಿ ನಂತರ ಸ್ವರ್ಣಗೌರಿ ಪೂಜೆ ನೆರವೇರಿತು. ಕೆಲವರು ಗೌರಿ ದೇವಿಗೆ ಒಂದು ಮೊರದ ಜತೆ ಬಾಗಿನ ನೀಡಿದರೆ ಇನ್ನು ಕೆಲವರು ಸುಮಂಗಲಿಯರಿಗೆ ಇಚ್ಛೆ, ಶಕ್ತಿ ಅನುಸಾರ ಬಾಗಿನ ನೀಡಿದರು. ನವ ವಿವಾಹಿತರು ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು.
ಇದರ ಮಧ್ಯೆ ಗಣೇಶ ಚತುರ್ಥಿಗೂ ಸಿದ್ಧತೆ ಭರದಿಂದ ಸಾಗಿತ್ತು. ಬೆಳಗ್ಗೆ ಗೌರಿ ಪೂಜೆ ನೆರವೇರಿಸಿ ಎಲ್ಲರೂ ಗಣೇಶನ ಮೂರ್ತಿ ಕೊಳ್ಳಲು ಮಳಿಗೆಗಳಿಗೆ ತೆರಳಿ ಮೂರ್ತಿಯನ್ನು ಆರಿಸುವಲ್ಲಿ ಮಗ್ನರಾಗಿದ್ದರೆ, ಇನ್ನು ಕೆಲವರು ಹೂವುಗಳು, ಇನ್ನಿತರೆ ಅಲಂಕಾರ ವಸ್ತುಗಳನ್ನುಕೊಳ್ಳುವ ತರಾತುರಿಯಲ್ಲಿದ್ದರು. ಗಣೇಶ ಮೂರ್ತಿಗಳ ಖರೀದಿಗೆ ನಗರ, ಗ್ರಾಮೀಣ ಪ್ರದೇಶದಿಂದ ಯುವಕರ ದಂಡೇ ಬಂದಿದ್ದು, ಲಗೇಜ್ ಆಟೋಗಳಲ್ಲಿ ತಮ್ಮ ನೆಚ್ಚಿನ ಗಣೇಶ ಮೂರ್ತಿಗಳನ್ನು ಖರೀದಿಸಿ ಗ್ರಾಮಗಳಿಗೆ ಕೊಂಡೊಯ್ಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಗಣಪತಿ ಮಂದಿರಗಳು ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಪೆಂಡಾಲ್ ಹಾಗೂ ಅಲಂಕಾರಿಕ ದೀಪಗಳನ್ನು ಅಳವಡಿಸಿ ಗಣೇಶನ ಬರುವಿಕೆಗೆ ಅನೇಕ ಸಿದ್ಥತೆಯೂ ನಡೆದಿತ್ತು.