ಬೆಂಗಳೂರು: ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆ ಮುಕ್ತಾಯವಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸತತ 5 ಗಂಟೆಗಳ ಕಾಲ ಪರೀಕ್ಷೆ ನಡೆಸಲಾಯ್ತು.
ರಾಘವೇಶ್ವರರ ರಕ್ತ ಪರೀಕ್ಷೆ, ಮೂತ್ರ, ವೀರ್ಯಾಣು ಪರೀಕ್ಷೆ, ದೈಹಿಕ ಸದೃಢತೆ ಬಗ್ಗೆಯೂ ವೈದ್ಯರ ತಂಡ ಪರೀಕ್ಷೆ ನಡೆಸಿದೆ. ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಣ್ಣ, ಡಾ. ಚಂದ್ರಶೇಖರ್, ಡಾ. ಚಂದ್ರಶೇಖರ್ ಪಿಳ್ಳೈ, ಡಾ. ಎಸ್ ವೆಂಕಟರಾಘವ್ ಡಾ. ವೀರಣ್ಣಗೌಡರು ಪರೀಕ್ಷೆ ನಡೆಸಿದ್ದಾರೆ. ತನಿಖಾಧಿಕಾರಿ ಸಿರಿಗೌರಿ ಸಹ ಈ ಸಂದರ್ಭ ಉಪಸ್ಥಿತರಿದ್ದರು.
ಡಾ. ದುಗ್ಗಪ್ಪ ಹೇಳಿಕೆ
ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆಯ ನೇತೃತ್ವ ವಹಿಸಿಕೊಂಡಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುಗ್ಗಪ್ಪ ಅವರು, ಶ್ರೀಗಳ ರಕ್ತ, ಮೂತ್ರ ಹಾಗೂ ಡಿಎನ್‌ಎ ಪರೀಕ್ಷೆಗಳನ್ನು ಮಾಡಲಾಗಿದೆ.
ಡಿಎನ್‌ಎ ಪರೀಕ್ಷೆ ಸಂಬಂಧಿಸಿದಂತೆ 16 ಪರೀಕ್ಷೆಗಳನ್ನು ಮಾಡಬೇಕಿದ್ದು, ಅದರಲ್ಲಿ 13 ಪರೀಕ್ಷೆಗೊಳಪಡಲು ಶ್ರೀಗಳು ಒಪ್ಪಿದ್ದಾರೆ. ಆದರೆ ಇನ್ನುಳಿದಂತೆ ಮೂರು ಪರೀಕ್ಷೆಗಳನ್ನು ಶ್ರೀಗಳು ನಿರಾಕಸಿದ್ದಾರೆ. ಈ ಮೂರು ಪರೀಕ್ಷೆಗಳನ್ನು ಬಲವಂತದಿಂದ ಮಾಡಿಸಲು ಸಾಧ್ಯವಿಲ್ಲ ಹೀಗಾಗಿ ಅವರ ಒಪ್ಪಿಗೆ ಅಗತ್ಯ ಎಂದು ಡಾ. ದುಗ್ಗಪ್ಪ ಹೇಳಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವರದಿ ರವಾನಿಸಲಾಗಿದೆ. ಪ್ರಯೋಗಾಲಯದಿಂದ ಅಂತಿಮ ವರದಿ ಬಂದ ನಂತರ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.