ಚಿಕ್ಕಮಗಳೂರು: ದೇವನೂರು ರೈಲು ನಿಲ್ದಾಣದ ಬಳಿ ಭಾನುವಾರ ರೈಲು ಢಿಕ್ಕಿಯಿಂದ ೯ ವರ್ಷದ ಚಿರತೆಯೊಂದು ಮೃತಪಟ್ಟಿದೆ. ಈ ಅಪಘಾತವನ್ನು ನೋಡಿದ ರೈಲ್ವೇ ಸಿಬ್ಬಂದಿಯೋರ್ವ, ಸ್ಟೇಶನ್ ಮಾಸ್ಟರ್ ಗಮನಕ್ಕೆ ತಂದಿದ್ದು ಅವರು ನಂತರ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಎಸ್ ಕೊಪ್ಪಲು, ಗುಣಸಾಗರ, ಹಲ್ಲಾಡ ಹಳ್ಳಿ, ಕಬ್ಬಲಿ, ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮಗಳ ಸುತ್ತಮುತ್ತ ಕೆಲವು ದಿನಗಳಿಂದ ಸುತ್ತಾಡುತ್ತಿದ್ದ ಚಿರತೆ ಗ್ರಾಮಸ್ಥರಲ್ಲಿ ಭಯಭೀತಿಯನ್ನು ಸೃಷ್ಟಿಸಿತ್ತು. ಚಿರತೆಯ ಸಾವಿನ ಸುದ್ದಿಯನ್ನು ತಿಳಿದ ಗ್ರಾಮಸ್ಥರು, ಕಾಡು ಪ್ರಾಣಿಗಳನ್ನು ಪತ್ತೆ ಹಚ್ಚಲು ಅರಣ್ಯಾಧಿಕಾರಿಗಳನ್ನು ಮನವಿ ಮಾಡಿದರು.
ಸ್ಥಳಕ್ಕೆ ಭೇಟಿ ನೀಡಿದ ಅರಸೀಕೆರೆ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿಬ್ಬೇಗೌಡ ಪ್ರಕರಣವನ್ನು ದಾಖಲಿಕೊಂಡಿದ್ದಾರೆ.