ಬೆಂಗಳೂರು: ಬಿಬಿಎಂಪಿಯಲ್ಲಿ ಆಡಳಿತಾರೂಢ ಬಿಜೆಪಿ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆ ಸಿದ್ಧತೆ ಆರಂಭವಾಗಿದೆ.
ಸದ್ಯದ ಆಡಳಿತದ ಅವಧಿ 2015ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ. ಮುಂಬರುವ ಅವಧಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗದ ಸಭೆ ಡಿ.29ರಂದು ಮಧ್ಯಾಹ್ನ 3 ಗಂಟೆಗೆ ಕರೆದಿದೆ. ಆಯೋಗದ ಆಯುಕ್ತರಾದ ಶ್ರೀನಿವಾಸಚಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಈ ಬಗ್ಗೆ ಆಯೋಗದ ಆಯುಕ್ತರು ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ ಅವರಿಗೆ ಡಿ.16ರಂದು ಪತ್ರ ಬರೆದಿದ್ದು, ಇದನ್ನಾಧರಿಸಿ ಆಯುಕ್ತರು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಕೌನ್ಸಿಲ್ ಸಿಬ್ಬಂಧಿ ಹಾಗೂ ಚುನಾವಣಾ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆಯೋಗದ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಬಿಬಿಎಂಪಿ ಆಯುಕ್ತರು ಹಾಗೂ ಬಿಬಿಎಂಪಿ ಚುನಾವಣಾ ವಿಭಾಗದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪೂರ್ವ ಸಿದ್ಧತಾ ಸಭೆಯಲ್ಲಿ ಕ್ಷೇತ್ರ ವಿಂಗಡಣೆ ಹಾಗೂ ಮೀಸಲು ನಿಗದಿ ಅಧಿಸೂಚನೆ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಲಿದೆ. ಹಾಗೆಯೇ ಮುಂಬರುವ ಚುನಾವಣೆಗೆ ರೂ.20ಕೋಟಿಗಳ ಅಗತ್ಯವಿದ್ದು, ಅದನ್ನು ಬಿಡುಗಡೆಗೆ ಕೋರಿಕೆ ಸಲ್ಲಿಸುವ ಬಗ್ಗೆಯೂ ಪ್ರಸ್ತಾಪವಾಗಲಿದೆ.
ಉಳಿದಂತೆ ಜಿಲ್ಲಾ ಚುನಾವಣಾಧಿಕಾರಿಗಳ ನೇಮಕ, ಸಹಾಯಕ ಸಿಬ್ಬಂದಿ ಮತ್ತು ತಾಂತ್ರಿಕ ವರ್ಗದ ನೇಮಕ, ಮತಗಟ್ಟೆ, ಎಣಿಕೆ ಕೇಂದ್ರಗಳ ರಚನೆ ಬಗ್ಗೆ ಚರ್ಚೆ ನಡೆಯಲಿದೆ. ಇದಕ್ಕಿಂತ ಮುಖ್ಯವಾಗಿ ಮತದಾರರ ಪಟ್ಟಿ ಸಿದ್ಧತೆ ಬಗ್ಗೆ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಸಲಾಗುತ್ತದೆ.
ಏಕೆಂದರೆ, ಪ್ರತಿ ಬಾರಿ ಬಿಬಿಎಂಪಿ ಚುನಾವಣೆಯಲ್ಲೂ ಮತದಾರರ ಹೆಸರು ಪಟ್ಟಿಯಿಂದ ಏಕಾಏಕಿ ತಪ್ಪುವ ಬಗ್ಗೆ ದೂರುಗಳು ಬರುತ್ತವೆ. ಈ ಬಾರಿ ಯಾವುದೇ ಕಾರಣಕ್ಕೂ ಅಂಥ ದೂರುಗಳು ಎದುರಾಗದಂತೆ ಕ್ರಮಕೈಗೊಳ್ಳಲು ಆಯೋಗ ಕೆಲವು ಮುಂಜಾಗ್ರತೆ ವಹಿಸಲಿದೆ. ಹೀಗಾಗಿ ಈ ವಿಚಾರ ಕೂಡ ಸಭೆಯಲ್ಲಿ ಗಂಭೀರವಾಗಿ ಪ್ರಸ್ತಾಪವಾಗಲಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.