ಬೆಂಗಳೂರು: ಸರ್ಕಾರ ನೀಡುವ ಪ್ರಶಸ್ತಿಗಳಿಗೆ ಯೋಗ್ಯರು ಹಾಗೂ ಅರ್ಹರನ್ನು ಆರಿಸುತ್ತಿಲ್ಲ. ಅದರಲ್ಲಿಯೂ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಳ್ಳಲು ಹೆಚ್ಚು ಲಾಬಿ ನಡೆಯುತ್ತಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸರ್ಕಾರ ತಮ್ಮನ್ನು ಪರಿಗಣಿಸಿಲ್ಲ ಎಂದು ಆರೋಪಿಸಿ ಬಿ.ವಿ.ಸತ್ಯನಾರಾಯಣ ರಾವ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾ.ಎಸ್.ಅಬ್ದುಲ್ ನಜೀರ್ ಅವರ ಪೀಠ, ರಾಜ್ಯೋತ್ಸವ ಪ್ರಶಸ್ತಿಗೆ ಪಡೆಯುವ ಅರ್ಜಿ ಒಂದು ರೀತಿಯಲ್ಲಿ ಟೆಂಡರ್‌ಗೆ ಪಡೆಯುವ ಅರ್ಜಿಯಂತಾಗಿದೆ. ಸದ್ಯಕ್ಕೆ 100-150 ಮಂದಿಗೆ ಈ ಪ್ರಶಸ್ತಿಯನ್ನು ನೀಡುವ ಪರಿಪಾಠ ನಿಂತಿದೆ. ನಮ್ಮಲ್ಲಿ 'ಸಾಹಿತಿ ನೀ ಊಟವಿಲ್ಲದೇ ಸಾಯಿತೀ' ಎಂಬ ಮಾತಿದೆ. ಯೋಗ್ಯ ವ್ಯಕ್ತಿಗಳಿಗೆ ಬದುಕಿರುವವರೆಗೂ ಗೌರವ ಸಿಗುವುದಿಲ್ಲ. ಅಂಥವರು ಎಲೆಮರೆಯ ಕಾಯಿಯಾಗಿಯೇ ಉಳಿದುಕೊಂಡು ಬಿಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಏನಿದು ವಿವಾದ?
2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ 'ಸಾಹಿತ್ಯ ಭಾಸ್ಕರ' ಮತ್ತು 'ಭಾಮಿನಿ ಭಾಸ್ಕರ' ಪ್ರಶಸ್ತಿ ಪುರಸ್ಕೃತರಾದ ಸತ್ಯನಾರಾಯಣ ರಾವ್ ಅರ್ಜಿಸಲ್ಲಿಸಿದ್ದರು. ಆದರೆ ಸರ್ಕಾರ ಇವರ ಹೆಸರನ್ನು ಪರಿಗಣಿಸಿರಲಿಲ್ಲ.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಶಂಕರಪ್ಪ ವಾದ ಮಂಡಿಸಿದ, ರಾವ್ ಅವರು ಪ್ರಶಸ್ತಿ ಪಡೆಯಲು ಅರ್ಹರು. ಮೂಲತಃ ಎಂಜಿನೀಯರ್ ಆಗಿರುವ ಇವರು ಒಟ್ಟಾರೆ 66 ಪುಸ್ತಕಗಳನ್ನು ರಚಿಸಿದ್ದಾರೆ. ಇವರು ರಾಜ್ಯೋತ್ಸವ ಪ್ರಶಸ್ತಿ ಪಡೆಯಲು.
ಅರ್ಹರಾಗಿದ್ದರೂ, ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲು ಆದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಏಕಸದಸ್ಯ ಪೀಠ, 2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಈಗಾಗಲೇ ನೀಡಿಯಾಗಿದೆ.
ಈಗ ಮತ್ತೆ ನೀಡುವುದು ಅಸಾಧ್ಯ. ರಾಜ್ಯ ಸರ್ಕಾರ 2015ನೇ ಸಾಲಿನಲ್ಲಿ ಇವರ ಹೆಸರು ಪರಿಗಣಿಸಬಹುದೆಂದು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ಇತ್ಯರ್ಥಗೊಳಿಸಿತು.