ಆನೇಕಲ್: ಅಗ್ರಿ ಇಂಡಿಯಾ ಕಂಪನಿಯಾಗಿ ಹಣ ಸಂಗ್ರಹ ಮಾಡುತ್ತಿದ್ದ ಏಜೆಂಟನೊಬ್ಬ ಹಣ ವಾಪಸ್ ನೀಡಲಾಗದೇ ಮನೆಯ ಬಳಿ ಜನ ಜಮಾಯಿಸಿದಾಗ ಮರಣ ಪತ್ರ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಆನೇಕಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ತಿಮ್ಮರಾಯಸ್ವಾಮಿ ಬಡಾವಣೆ ನಿವಾಸಿ ನಾಗರಾಜು(35) ಮೃತ ದುರ್ದೈವಿ. ಈತನಿಗೆ ಹೆಂಡತಿ ಮತ್ತು 1 ಮಗುವಿಗೆ ಎನ್ನಲಾಗಿದೆ.
ಹಾಲು ಮಾರಾಟದ ಜೊತೆಗೆ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ ನಾಗರಾಜ 3 ವರ್ಷಗಳಿಂದ ಅಗ್ರಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಏಜೆಂಟ್ ಆಗಿ ಹಣ ಸಂಗ್ರಹ ಮಾಡುತ್ತಿದ್ದ. ಆನೇಕಲ್‌ನಲ್ಲಿನ 100 ಏಜೆಂಟರ ಪೈಕಿ ಟಾಪ್ ಟೆನ್‌ರಲ್ಲಿ ಗುರ್ತಿಸಿಕೊಂಡಿದ್ದ ಈತ ಸುಮಾರು ರೂ.2 ಕೋಟಿಯಷ್ಟು ಡೆಪಾಸಿಟ್ ಸಂಗ್ರಹ ಮಾಡಿದ್ದ ಎನ್ನಲಾಗಿದೆ.
ಮಾಸಿಕ ಶೇ.3 ಬಡ್ಡಿ ದರವನ್ನು ಡೆಪಾಸಿಟ್ ಹಣಕ್ಕೆ ನೀಡಲಾಗುವುದು ಎಂದು ಅಗ್ರಿ ಇಂಡಿಯಾ ಹೊರಡಿಸಿದ್ದ ಸ್ಕೀಮ್‌ಗೆ ನೂರಾರು ಗ್ರಾಹಕರು ಹಣವನ್ನು ತೊಡಗಿಸಿದ್ದರು. ಅವಧಿ ಮುಗಿದು ತನ್ನ ಗ್ರಾಹಕರಿಗೆ ಮೆಚ್ಯುರಿಟಿ ಹಣ ವಾಪಸ್ ಕೊಡಬೇಕಿದ್ದ ಅಗ್ರಿ ಇಂಡಿಯಾದಿಂದ ಹಣ ವಾಪಸ್ ಬರದ ಕಾರಣ ಜನ ಮನೆ ಬಳಿ ಜಮಾಯಿಸಿದ್ದರು.
ಹಣ ಮರು ಪಾವತಿ ಮಾಡಲು ಆಗದ ನಾಗರಾಜು ಸಂಜೆ ತನ್ನ ಮನೆಯಲ್ಲಿ ಮರಣ ಪತ್ರ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ಮರಣ ಪತ್ರದಲ್ಲಿ ಸಾರ್ವಜನಿಕರ ಹಾಗೂ ಬಡವರ ಸುಮಾರು ನೂರಾರು ಕೋಟಿಯಷ್ಟು ಹಣ ಸಂಗ್ರಹಿಸಿ ಪರಾರಿಯಾಗಿರುವ ಬ್ಲೇಡ್ ಕಂಪನಿ ವಂಚಕರಿಗೆ ಶಿಕ್ಷೆ ಕೊಡಿಸಿ ಎಂದು ಬರೆದಿದ್ದಾನೆ.