ಕುರಿಗಳಿಗೆ ಪ್ರೇಮ್ ಕಹಾನಿ ಕಂಟಕವಾಯ್ತೆ?
ಇದನ್ನೊಂದು ವಿಲಕ್ಷಣ ಪ್ರಸಂಗ ಎಂದೇ...
ಕಲಬುರಗಿ: ಇದನ್ನೊಂದು ವಿಲಕ್ಷಣ ಪ್ರಸಂಗ ಎಂದೇ ಹೇಳಬೇಕು! ಪ್ರೀತಿ-ಪ್ರೇಮ... ಇದೆಲ್ಲ ಸರಿಯಲ್ಲ, ನಮ್ಮ ಹುಡ್ಗಿ ತಂಟೆಗೆ ಬರಬೇಡ ಎಂದದ್ದೇ ಬಡಕಾರ್ಮಿಕ ದಂಡಗುಂಡ ಶರಣಪ್ಪ ಕುಟುಂಬಕ್ಕೆ ಎರವಾಯ್ತೇನೋ, ಪೋಷಕರಿಂದ ಹೀಗೆ ಹೇಳಿಸಿಕೊಂಡ ಭಗ್ನಪ್ರೇಮಿ, ಶಕ್ತಿನಗರ ನಿವಾಸಿ ರವಿ ಚೋಕ್ಲು ರಾಠೋಡ ಸೇಡು ತೀರಿಸಿಕೊಳ್ಳೋಣ ಎಂದು ನಗರದ ಹೊರವಲಯ, ಅಶೋಕ ಹೊನ್ನಳ್ಳಿ ಹೊಲದಲ್ಲಿ ವಾಸವಾಗಿರುವ ಶರಣಪ್ಪರ ಕುರಿದೊಡ್ಡಿ ಹೊಕ್ಕು ಮನಸೋಯಿಚ್ಛೆ ಕುರಿಗಳ ರುಂಡ ತುಂಡರಿಸಿ ಬಿಸಾಕಿದ್ದಾನೆ!
ಕಳೆದ ಶುಕ್ರವಾರ(ಅ.31) ಮಧ್ಯರಾತ್ರಿ ಕುರಿಗಳ ಮಾರಣಹೋಮ ಘಟನೆ ಸಂಭವಿಸಿದೆ. ಶರಣಪ್ಪ ದಂಡಗುಂಡ ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ನೀಡಿದ್ದಾನೆ. ತಮ್ಮ ದೊಡ್ಡಿಯಲ್ಲಿ ಕಟ್ಟಲಾಗಿದ್ದ 100 ಕುರಿಗಳ ಪೈಕಿ 19 ಕುರಿಗಳನ್ನು ಗೆಳೆಯರೊಂದಿಗೆ ಕೂಡಿಕೊಂಡು ರವಿ ರಾಠೋಡ ಕತ್ತರಿಸಿ ಹಾಕಿದ್ದಾನೆ. ಇದರಿಂದಾಗಿ ತಮಗೆ ರು. 50 ಸಾವಿರದಷ್ಟು ನಷ್ಟವಾಗಿದೆ ಎಂದು ದೂರು ನೀಡಿದ್ದಾನೆ.