ಬೆಂಗಳೂರು: ಬೆಂಗಳೂರಿನ ಪ್ರಾಚೀನ ಜಾತ್ರೆಗಳೆಂದರೆ ಕರಗ ಉತ್ಸವ ಮತ್ತು ಕಡಲೆಕಾಯಿ ಪರಿಷೆ. ಸಾಂಸ್ಕೃತಿಕ ನಗರಿ ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ ಇಂತಹದ್ದೇ ಒಂದು ಸಾಂಸ್ಕೃತಿಕ ಉತ್ಸವ ತಲೆ ಎತ್ತಿದೆ. ಅದೇ ಈ ಪುಸ್ತಕ ಪರಿಷೆ.
ಸೃಷ್ಟಿ ವೆಂಚ್ಯೂರ್ಸ್ ಸಂಸ್ಥೆ ೬ ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪುಸ್ತಕ ಪರಿಷೆ ಈಗ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ಡಿಸೆಂಬರ್ ೭, ೮, ೯ ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಬೃಹತ್ ಮೈದಾನದಲ್ಲಿ ಈ ಪುಸ್ತಕ ಪರಿಷೆ ನಡೆಯಲಿದೆ.
ಏನಿದು ಪುಸ್ತಕ ಪರಿಷೆ?
ಈ ಪುಸ್ತಕ ಪರಿಷೆ ಮಾಮೂಲಿ ಪುಸ್ತಕ ಮೇಳದಂತಲ್ಲ. ಇಲ್ಲಿ ನೀವು ಹಣ ಕೊಟ್ಟು ಯಾವುದೇ ಪುಸ್ತಕಗಳನ್ನು ಕೊಳ್ಳುವ ಅವಶ್ಯಕತೆ ಇಲ್ಲ. ನೀವು ಉಚಿತವಾಗಿ ಒಂದು ಪುಸ್ತಕವನ್ನು ಈ ಪರಿಷೆಯಿಂದ ತೆಗೆದುಕೊಳ್ಳಬಹುದು.
ಕ್ಷೀಣಿಸುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಮತ್ತೆ ಮುಖ್ಯವಾಹಿನಿಗೆ ತರಲು ಈ ಪ್ರಯತ್ನ ಎಂದು ಹೇಳುವ ಸೃಷ್ಟಿ ವೆಂಚ್ಯೂರ್ಸ್ ಸಂಸ್ಥೆ, ಈ ವರ್ಷ ೨೫ ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರದರ್ಶಿಸಲಿದ್ದೇವೆ ಎನ್ನುತ್ತಾರೆ. ಕಳೆದ ವರ್ಷ ೨೦ ಲಕ್ಷ ಪುಸ್ತಕಗಳನ್ನು ಪ್ರದರ್ಶಿಸಿದ್ದೆವು, ಸುಮಾರು ೧.೪ ಲಕ್ಷ ಜನರು ಪುಸ್ತಕ ಪರಿಷೆಗೆ ಬಂದಿದ್ದರು. ಈ ವರ್ಷ ೨ ಲಕ್ಷಕೂ ಹೆಚ್ಚು ಜನ ಬರುವ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ.