ಬೆಳಗಾವಿ: ಸುವರ್ಣಸೌಧದಲ್ಲಿ ಅಧಿವೇಶನ ನಡೆಸಲು ಸಾಧ್ಯವಾಗದಿದ್ದರೆ ಎಮ್ಮೆಗಳ ಸಭೆಯನ್ನಾದರೂ ನಡೆಸಿ ಎಂದು ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದ್ದಾರೆ.
ಬುಧವಾರ ಇಲ್ಲಿನ ಸುವರ್ಣಸೌಧದ ಮುಂಭಾಗ ಎಮ್ಮೆಗಳೊಂದಿಗೆ ವಿಶಿಷ್ಟ ಪ್ರತಿಭಟನೆ ನಡೆಸಿದ ಅವರು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಅವರು ಬೆಳಗಾವಿ ಸುವರ್ಣ ವಿಧಾನಸೌಧ ವರ್ಷವಡೀ ಚಟುವಟಿಕೆಯಿಂದ ಇರುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಎಮ್ಮೆಗಳ ಸಭೆ ನಡೆಸುವುದಕ್ಕಾದರೂ ಬಿಡಬೇಕು ಎಂದು ಸರ್ಕಾರಕ್ಕೆ ಮಾತಿನಲ್ಲೇ ಚಾಟಿ ಬೀಸಿದರು.
ಇದೇ ವೇಳೆ, ಸೌಧದ ಆವರಣದೊಳಗೆ ಎಮ್ಮೆಗಳ ಸಭೆ ನಡೆಸಲು ಯತ್ನಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಸ್ಥಾಪಕ ವಾಟಾಳ್ ನಾಗರಾಜ್, ಮತ್ತವರ ಬೆಂಬಲಿಗರನ್ನು ಪೊಲೀಸರು ಬಂಧಿಸಿ, ಅನಂತರ ಬಿಡುಗಡೆ ಮಾಡಿದರು.
ಗಡಿಭಾಗದಲ್ಲಿ ಗಲಾಟೆ ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಬೆಳಗಾವಿಯಲ್ಲಿ ಆಗುತ್ತಿರುವ ಎಲ್ಲ ಗಲಾಟೆಗೆ ಎಂಇಎಸ್ ಮುಖಂಡರು ಮತ್ತು ಕಾರ್ಯಕರ್ತರೇ ಕಾರಣ. ರಾಜ್ಯ ಸರ್ಕಾರ ಕನ್ನಡ ಹೋರಾಟಗಾರರು ಧ್ವನಿ ಎತ್ತಿದರೆ ಗೂಂಡಾ ಕಾಯ್ದೆಯಡಿ ಬಂಧಿಸುತ್ತಾರೆ. ಅದೇ ರೀತಿ ನಾಡದ್ರೋಹಿ ಕೃತ್ಯ ಎಸಗುತ್ತಿರುವ ಎಂಇಎಸ್ ಕಾರ್ಯಕರ್ತರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು.
-ವಾಟಾಳ್ ನಾಗರಾಜ್, ಕನ್ನಡ ಚಳವಳಿ ಪಕ್ಷದ ನಾಯಕ