ಬೆಂಗಳೂರು: ಆಂಧ್ರ ಪ್ರದೇಶದ ಸಚಿವ ಡಾ.ಪಿ ನಾರಾಯಣ ಅವರ ವಿರುದ್ಧ ಕರ್ನಾಟಕದಲ್ಲಿ ಪ್ರಕರಣ ದಾಖಲಾಗಿದೆ.
ಅನುಮತಿ ಪಡೆಯದೇ ಇಂಗ್ಲೀಷ್ ಮಾಧ್ಯಮ ಶಾಲೆ ನಡೆಸುತ್ತಿರುವ ಆರೋಪದ ಮೇಲೆ ಪಿ ನಾರಾಯಣ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾರಾಯಣ ಇ-ಟೆಕ್ನೋ ಶಾಲೆಯ ಅಧ್ಯಕ್ಷ ನಾರಾಯಣ್ ಅವರು ಸರ್ಕಾರ ಅನುಮತಿ ಪಡೆಯದೆಯೇ 16 ಶಾಖೆಗಳನ್ನು ಹೊಂದಿರುವ ಶಾಲೆಗಳನ್ನು ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ನಡೆಸುತ್ತಿದ್ದಾರೆ.
ಈ ಸಂಬಂಧ ನಗರದ ಆಡುಗೋಡಿಯಲ್ಲಿ ನಾರಾಯಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ನಾರಾಯಣ ಹಾಗೂ ಶಾಲೆಯ ಪ್ರಾಂಶುಪಾಲರಾದ ರಮಾದೇವಿ ಸೇರಿದಂತೆ 8 ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ಲಾಕ್ ಶಿಕ್ಷಣ ಅಧಿಕಾರಿ ಮುನಿರೆಡ್ಡಿ ಅವರು ಸೆಕ್ಷನ್ 420ರಡಿಯಲ್ಲಿ ಮತ್ತು ಆರ್‌ಟಿಇ ಕಾಯ್ದೆ ಅಡಿ ನಾರಾಯಣ ಇ-ಟೆಕ್ನೋ ಶಾಲೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಶಾಲೆಯ ಆಡಳಿತ ಮಂಡಳಿಗೆ ನೋಟೀಸ್ ನೀಡಿಲಾಗಿದೆ. ಆದರೆ, ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮುನಿರೆಡ್ಡಿ ತಿಳಿಸಿದ್ದಾರೆ.