-ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಪೊಲೀಸ್ ಇಲಾಖೆಯ ಲೋಪ
ಬೆಂಗಳೂರು: ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ದಾಖಲಾಗುವ ಶೇ.60ರಷ್ಟು ದೂರುಗಳು ಪೊಲೀಸ್ ಇಲಾಖೆಯ ಲೋಪಗಳಿಗೆ ಸಂಬಂಧಿಸಿದ್ದು, ಈ ಪ್ರಮಾಣ ಮತ್ತಷ್ಟು ಹೆಚ್ಚುತ್ತಿದೆ.
ದೌರ್ಜನ್ಯ, ದೈಹಿಕ ಹಿಂಸೆ, ಕಿರುಕುಳ ಸೇರಿದಂತೆ ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಸುಮಾರು 20-25 ದೂರುಗಳು ನಿತ್ಯ ಮಾನವ ಹಕ್ಕು ಆಯೋಗಕ್ಕೆ ಬರುತ್ತಿವೆ.
ಇದರಲ್ಲಿ 6ರಿಂದ 7 ದೂರುಗಳು ಕೇವಲ ಪೊಲೀಸರ ಕಿರುಕುಳ ಅಥವಾ ಕರ್ತವ್ಯಲೋಪಕ್ಕೆ ಸಂಬಂಧಿಸಿವೆ. ಆಯೋಗ ರಚನೆಯಾದಾಗಿನಿಂದ ಇದುವರೆಗೆ 40 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಸಾರ್ವಜನಿಕರ ನಡುವಿನ ಕಲಹ, ಕೋಮುವಾದ, ವರದಕ್ಷಿಣೆಯಂತಹ ಸಾಮಾಜಿಕ ಸಮಸ್ಯೆಗಳಿಗಿಂತ ಹೆಚ್ಚಾಗಿ ಪೊಲೀಸರಿಂದಾಗುವ ಲೋಪಗಳ ದೂರು ಹೆಚ್ಚುತ್ತಿವೆ.
ದೂರು ದಾಖಲಿಸಿಕೊಳ್ಳದಿರುವುದು, ದೈಹಿಕ ಹಿಂಸೆ, ದೂರುದಾರರ ಬಳಿ ಹಣ ವಸೂಲಿ ಸೇರಿದಂತೆ ಹಲವು ಕರ್ತವ್ಯಲೋಪಗಳ ಬಗ್ಗೆ ಆಯೋಗದಲ್ಲಿ ಹೆಚ್ಚು ದೂರುಗಳು ದಾಖಲಾಗುತ್ತಿವೆ.
ಪೊಲೀಸರಿಂದ ಮಾನವ ಹಕ್ಕು ಉಲ್ಲಂಘನೆಯಾದಾಗ ಆಯೋಗವು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಶಿಫಾರಸು ಅಥವಾ ಸೂಚನೆಗಳನ್ನು ನೀಡುತ್ತಿದೆ. ಪ್ರತಿ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳುವ ಆಯೋಗ, ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ಅಥವಾ ಲಿಖಿತವಾಗಿ ಸೂಚನೆಗಳನ್ನು ನೀಡುತ್ತದೆ. ಸತತವಾಗಿ ಸೂಚನೆ ನೀಡುತ್ತಿದ್ದರೂ, ಪೊಲೀಸರ ಕರ್ತವ್ಯಲೋಪದ ಬಗ್ಗೆ ದೂರುಗಳು ಕಡಿಮೆಯಾಗಿಲ್ಲ.
ಬೆಂಗಳೂರಿನಲ್ಲಿ ಅಧಿಕ: ಇದು ರಾಜ್ಯದ ಪ್ರಮಾಣವಾದರೆ, ನಗರವೊಂದಲ್ಲೇ ದೂರುಗಳ ಪ್ರಮಾಣ ಶೇ.70ರಷ್ಟಿದೆ. ಹೀಗಾಗಿ ಆಯೋಗ ನಗರದ ಪೊಲೀಸ್ ಠಾಣೆಗಳಿಗೆ ಹೆಚ್ಚಿನ ಗಮನ ಹರಿಸಿದ್ದು, ಪ್ರಕರಣಗಳಿಗೆ ತಕ್ಕಂತೆ ಶಿಫಾರಸುಗಳನ್ನು ನೀಡುತ್ತಿದೆ.
ಜೈಲಿನಲ್ಲಿ ಮರಣ, ಜೈಲಿನಲ್ಲಿ ಹಿಂಸೆ, ಜೈಲಿನಲ್ಲಿ ಅತ್ಯಾಚಾರ, ಎನ್‌ಕೌಂಟರ್, ದಾಖಲೆಯಿಲ್ಲದ ಬಂಧನ, ಪೊಲೀಸ್ ನಿರ್ಲಕ್ಷ್ಯ, ಕೈದಿಗಳ ಹಕ್ಕು ಉಲ್ಲಂಘನೆ ಸೇರಿದಂತೆ ಆಯೋಗದಲ್ಲಿ ಪ್ರತ್ಯೇಕವಾಗಿ ದೂರುಗಳ ವಿಭಾಗ ಸೃಷ್ಟಿಸಲಾಗಿದೆ. ಹೆಚ್ಚು ದೂರುಗಳು ಪೊಲೀಸರಿಗೆ ಸಂಬಂಧಿಸಿದ ವಿಭಾಗಗಳಲ್ಲೇ ದಾಖಲಾಗುತ್ತಿದೆ.
ಕಾರ್ತಿಕ್ ಭಟ್