ಬೆಂಗಳೂರು: ನಗರದಲ್ಲಿ ಅತ್ಯಾಚಾರಿಗಳ ಅಟ್ಟಹಾಸ ಮುಂದುವರೆದಿದ್ದು ಹಲವು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
ಮೈಸೂರು ರಸ್ತೆಯಲ್ಲಿರುವ ಖಾಸಗಿ ಕಾಲೇಜಿನ ಪಿಯು ವಿದ್ಯಾರ್ಥಿನಿ ಮೇಲೆ ಶಾಲೆಯ ಬಸ್ ಚಾಲಕ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಪೊಲೀಸರು ಆರೋಪಿ ಸಂಜೀವಮೂರ್ತಿ(25) ಎಂಬಾತನನ್ನು ಬಂಧಿಸಿದ್ದಾರೆ.
ಅ.25ರಂದು ಸಂಜೆ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜತೆ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದಳು. ಆ ವೇಳೆ ಜೋರು ಮಳೆ ಬಂದ ಕಾರಣ ಪಾಳು ಬಿದ್ದ ಮನೆಯೊಂದರ ಬಳಿ ಇದ್ದ ಮರದ ಕೆಳಗೆ ಇಬ್ಬರು ನಿಂತಿದ್ದರು.
ಆರೋಪಿ ಸಂಜೀವ ಕೂಡ ಅಲ್ಲೇ ನಿಂತಿದ್ದ. ಯುವಕನ ಮೊಬೈಲ್ ಫೋನ್ ಕಿತ್ತುಕೊಳ್ಳಲು ಸಂಜೀವ ಯತ್ನಿಸಿದ್ದಾನೆ. ಯುವಕ, ಯುವತಿ ಇಬ್ಬರೂ ಪ್ರತಿರೋಧ ವ್ಯಕ್ತಪಡಿಸಿದ್ದಾಗ ದೊಣ್ಣೆಯಿಂದ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪಿ, ಯುವತಿಯನ್ನು ಪಾಳು ಬಿದ್ದಿದ್ದ ಮನೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.
ಬಳಿಕ ಯುವಕನ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ. ಮೊಬೈಲ್‌ನಲ್ಲಿ ವಿಡಿಯೋ ಇದ್ದು ಅದನ್ನು ಸಾಮಾಜಿಕ ತಾಣಕ್ಕೆ ಬಿಡುಗಡೆ ಮಾಡುವುದಾಗಿ ಬೆದರಿಸಿದ್ದರಿಂದ ಯುವತಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಕೆಲ ದಿನಗಳ ನಂತರ ಯುವತಿಗೆ ಕರೆಮಾಡಿ ಕರೆಯಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ.
ಮತ್ತೆ ಮತ್ತೆ ಯುವತಿಗೆ ಕರೆ ಮಾಡುತ್ತಿದ್ದ ಆರೋಪಿ, ಹಣ ನೀಡಬೇಕು ಎಂದು ಬೆದರಿಕೆ ಹಾಕುತ್ತಿದ್ದ. ನೊಂದ ಯುವತಿ, ಸ್ನೇಹಿತರ ಮೂಲಕ ಕನ್ನಡ ಸಂಘಟನೆ ಮೂಲಕ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.