ನಾಳೆಯಿಂದ ಅಂತಾರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ
ದೇಶದಲ್ಲೇ ಮೊದಲ ಬಾರಿಗೆ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯ...
ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಆಯೋಜಿಸಿರುವ 7 ದಿನಗಳ ಅಂತಾರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ ನ.14ರಿಂದ ನ.20ರವರೆಗೆ ನಡೆಯಲಿದೆ.
ಆಯ್ಕೆಯಾದ ಮಕ್ಕಳ ಚಿತ್ರಗಳು ಉಪಗ್ರಹ ತಂತ್ರಜ್ಞಾನದ ಮೂಲಕ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿನ 90 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿವೆ. 10 ಲಕ್ಷ ಮಕ್ಕಳು ಚಿತ್ರಗಳನ್ನು ವೀಕ್ಷಣೆ ಮಾಡುವ ನಿರೀಕ್ಷೆಯಿದೆ.
ಚಿತ್ರಗಳ ವೀಕ್ಷಣೆಗೆ ಮಕ್ಕಳನ್ನು ಕರೆತರುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಚಲನಚಿತ್ರ ಅಕಾಡೆಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ವಿವಿಧ ಸಂಘ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ.
ಸರ್ಕಾರೇತರ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ ಎಂದು ವಾರ್ತಾ ಮತ್ತ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂದು ಉದ್ಘಾಟನೆ: ಪ್ರದರ್ಶನದ ಆರಂಭಕ್ಕೂ ಮುನ್ನಾದಿನ ಅಂದರೆ ನ.13ರಂದೇ ಸಿನಿಮೋತ್ಸವಕ್ಕೆ ನಗರದಲ್ಲಿ ಚಾಲನೆ ಸಿಗಲಿದೆ. ಅಂಬೇಡ್ಕರ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿನಿಮೋತ್ಸವ ಉದ್ಘಾಟಿಸಿ ಮಾತನಾಡಲಿದ್ದಾರೆ. ಸಚಿವರಾದ ರಾಮಲಿಂಗಾರೆಡ್ಡಿ, ಕಿಮ್ಮನೆ ರತ್ನಾಕರ್, ಉಮಾಶ್ರೀ, ಸಂಸದ ಪಿ.ಸಿ ಮೋಹನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ ಗಂಗರಾಜು ಭಾಗವಹಿಸಲಿದ್ದಾರೆ.
ಭಾರತೀಯ ಮಕ್ಕಳ ಚಲನಚಿತ್ರ ಒಕ್ಕೂಟದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರವಣ್ ಕುಮಾರ್, ಚಿತ್ರೋತ್ಸವ ಸಲಹೆಗಾರ ಶ್ರೀನಿವಾಸ ಸಂತಾನಂ, ನಟ ಹಾಗೂ ನಿರ್ದೇಶಕರಾದ ಕಿಶನ್ ಎಸ್.ಎಸ್ ಅರ್ಜುನ್ ಸರ್ಜಾ, ವಿಜಯರಾಘವೇಂದ್ರ, ನಟಿ ರಾಧಿಕಾ ಪಂಡಿತ್ ಭಾಗವಹಿಸಲಿದ್ದಾರೆ.
ಮೊದಲ ಸಿನಿಮಾ ಸಿಂಡ್ರೆಲ್ಲಾ ಮೂನ್
ರಾಜ್ಯ ಮಟ್ಟದಲ್ಲಿ ಆಯೋಜಿತ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಉದ್ಘಾಟನೆ ಚಿತ್ರವಗಾ ಚೀನಾದ ಮೂನ್ ಪ್ರದರ್ಶನಗೊಳ್ಳುತ್ತಿದೆ.
ಬೋವೆನ್ ಇದರ ನಿರ್ದೇಶಕ. ಹೆಣ್ಣು ಮೇಲಿನ ಶೋಷಣೆ ಹಾಗೂ ಬಾಲ ಪದ್ಥತಿಯ ಮೇಲೆ ಈ ಚಿತ್ರ ಬೆಳಕು. ಹೆಣ್ಣು-ಗಂಡಿನ ನಡುವಿನ ತಾರತಮ್ಯ ಚಿತ್ರದ ಕಥಾವಸ್ತು.
6ರಿಂದ 10 ವರ್ಷದ ಮಕ್ಕಳಿಗೆ
| ಚಿತ್ರ | ನಿರ್ದೇಶಕ | ದೇಶ |
| ಟೈನಾ | ರೋಸಾನೆ ಸ್ವರ್ತಮನ್ | ಬ್ರೆಜಿಲ್ |
| ಯಲೋಕೊಲ್ಟ್ | ಕೋರೊಲ್ ದೋರ್ಜ್ | ಮಂಗೋಲಿಯಾ |
| ಪನಿ ಕ್ಲುಕಿ | ವೆಸಾ ಸಿಂವೋಕ | ಝೇಕ್ ರಿಪಬ್ಲಿಕ್ |
| ಬ್ಯೂ ಟೈಗರ್ | ಪೀಟರ್ ಔಕ್ರೋಪೆಕ್ | ಝೇಕ್ ರಿಪಬ್ಲಿಕ್ |
| ಜರ್ನಿ ಆಫ್ ದಿ ಬಿಗನಿಂಗ್ ಆಫ್ ಟೈಮ್ | ಕರೆಲ್ ಜಮಾನ್ | ಝೇಕ್ ರಿಪಬ್ಲಿಕ್ |
| ಗೂಪಿ ಗವ್ಯಾಯಾ ಬಾತಾ ಬಜಾಯ | ಶಿಲ್ಪಾರನಾಡೆ | ಭಾರತ |
| ಟಚಿಂಗ್ ವೈಲ್ಡ್ ಹಾರ್ಸಸ್ | ಎಲೆನಾರ್ ಲಿಂಡೊ | ಅಮೆರಿಕ |
| ಕಫಲ್ | ಬತುಲ್ ಮುಕ್ತಿಯಾರ್ | ಭಾರತ |
| ಖೋಬ್ | ರೇನ್ ಬೋರಾ | ಭಾರತ |