ಬೆಂಗಳೂರು: ನಕಲಿ ಆನ್ಲೈನ್ ಶಾಪಿಂಗ್ ವೆಬ್ಸೈಟ್ ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದ 'ಬಿಐಜಿ ಎಸ್ಓಪಿ.ಕಾಮ್' ಕಚೇರಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರು ಮಂದಿ ಎಂಬಿಎ ಹಾಗೂ ಬಿಬಿಎಂ ಪದವೀಧರರನ್ನು ಬಂಧಿಸಿದ್ದಾರೆ.
ಬಿಹಾರ ಮತ್ತು ಜಾರ್ಖಂಡ್ ಮೂಲದ ಸುರೇಂದ್ರ ಗುಪ್ತಾ, ಪ್ರಿಯಾಂಶು ಕುಮಾರ್, ಪ್ರಕಾಶ್ ಕುಮಾರ್ ಸಿಂಗ್, ಕುಮಾರ್ ದಿಗ್ವಿಜಯ್, ಸೌಮೇನ್ ರಾಯ್ ಹಾಗೂ ಅಮರ್ನಾಥ್ ಬಂಧಿತರು.
ಇಂಟರ್ನೆಟ್ ಬಳಕೆದಾರರು ಜನಪ್ರಿಯ ವೆಬ್ಸೈಟ್ಗಳಿಗೆ ಭೇಟಿ ನೀಡಿದಾಗ ಬಿಐಜಿಎಸ್ಓಪಿ.ಕಾಮ್ ವೆಬ್ಸೈಟ್ನ್ನು ಈ ಆರೋಪಿಗಳು 'ಪಾಪ್ ಅಪ್' ಮಾಡುತ್ತಿದ್ದರು. ಅಲ್ಲಿ 'ನೀವು ಅದೃಷ್ಟವಂತರಾಗಿದ್ದು, ಕೇವಲ ರೂ.599ಕ್ಕೆ ಐಫೋನ್ ಸಿಗಲಿದೆ' ಎನ್ನುವ ಸಂದೇಶ ಬರುತ್ತಿತ್ತು. ಇದನ್ನು ನಂಬುತ್ತಿದ್ದ ಗ್ರಾಹಕರು ವೆಬ್ಸೈಟ್ಗೆ ಭೇಟಿ ನೀಡಿದರೆ ನಿಜಕ್ಕೂ ಮೊಬೈಲ್ ಫೋನ್ ಗೆದ್ದಿರುವಂತೆ ಸಂದೇಶ ಇರುತ್ತಿತ್ತು.
ಗ್ರಾಹಕರು ಈ ಸಂದೇಶವನ್ನೇ ನಂಬಿ, ಆನ್ಲೈನ್ ಮೂಲಕ ಹಣ ಪಾವತಿಸುತ್ತಿದ್ದರು. ಅದಕ್ಕಾಗಿ ಗ್ರಾಹಕರ ಸಂಪರ್ಕಕ್ಕೆ ಬಿಪಿಒ ಹಾಗೂ ಹಣಕಾಸಿನ ವಹಿವಾಟು ಮಾಡಲು ಐಸಿಐಸಿಐ ಗೇಟ್ ವೇ ವ್ಯವಸ್ಥೆ ಮಾಡಿಕೊಂಡಿದ್ದರು.
ಆದರೆ, ಗ್ರಾಹಕರ ಹಣ ಅಕೌಂಟಿಗೆ ಪಾವತಿಯಾಗುತ್ತಿದ್ದಂತೆ, 'ಸ್ವಲ್ಪ ತಡವಾಗಿದ್ದರಿಂದ ನಿಮಗೆ ಐಫೋನ್ ಮಿಸ್ ಆಗಿದೆ. ಹೀಗಾಗಿ ಬೇರೇನಾದರೂ ಆಯ್ಕೆ ಮಾಡಿಕೊಳ್ಳಿ. ಹಣ ವಾಪಸ್ ಮಾಡಲಾಗುವುದಿಲ್ಲ' ಎಂದು ಕಡಿಮೆ ಬೆಲೆಯ ಅಥವಾ ಕಳಪೆ ವಸ್ತುಗಳನ್ನು ಕೊಳ್ಳುವಂಥ ಪರಿಸ್ಥಿತಿಯನ್ನು ಗ್ರಾಹಕರಿಗೆ ಸೃಷ್ಟಿಸಲಾಗುತ್ತಿತ್ತು.
ಈ ರೀತಿ ವಂಚಕರಾದರವರೊಬ್ಬರು ಟ್ವಿಟರ್ ಮೂಲಕ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶನಿವಾರ ಬೇಗೂರು ಹೊಬಳಿ ಅಗರ ಗ್ರಾಮದಲ್ಲಿ ಬಿಜಿಐಎಸ್ ಓಪಿ.ಕಾಮ್ ಕಚೇರಿ ಮೇಲೆ ದಾಳಿ ನಡೆಸಿದರು.