ಬೆಂಗಳೂರು: ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ಆರ್‌ಬಿಐ ಬಡವಾಣೆಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವೃದ್ಧ ವೆಂಕಟರಮಣನ್(73) ಅವರಿಗೆ ಮಹಿಳಾ ಪೊಲೀಸ್ ಎಂದು ಹೇಳಿಕೊಂಡು ಚಿನ್ನದ ಸರ ಮತ್ತು ಉಂಗುರ ಸುಲಿಗೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ಸರಗಳ್ಳಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಇಂದಿರಾನಗರ 2ನೇ ಕ್ರಾಸ್ ನಿವಾಸಿ ಆಶಾ ಅಲಿಯಾಸ್ ಸೌಂದರ್ಯ(36) ಬಂಧಿತೆ. ಈಕೆಯಿಂದ 300 ಗ್ರಾಂ ಚಿನ್ನಾಭರಣ, ಮಾರುತಿ ಸ್ವಿಫ್ಟ್ ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ವೆಂಕಟರಮಣನ್ ಎಂಬವರು ಅಕ್ಟೋಬರ್ 25ರ ಬೆಳಿಗ್ಗೆ 8 ಗಂಟೆಗೆ ಆರ್‌ಬಿಐ ಬಡಾವಣೆಯ ವಾಯು ವಿಹಾರ ಮುಗಿಸಿ ಮನೆಗೆ ಹೋಗಲು ಮಗನ ದ್ವಿಚಕ್ರ ವಾಹನಕ್ಕಾಗಿ ಕಾಯುತ್ತಿದ್ದರು.
ಈ ವೇಳೆ ಸ್ಕೂಟರ್‌ನಲ್ಲಿ ಬಂದ ಆಶಾ, ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಿರಾ ಎಂದು ಬೆದರಿಸಿ ವೆಂಕಟರಮಣನ್ ಅವರ 24ಗ್ರಾಂ ಚಿನ್ನದ ಸರ ಮತ್ತು ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದಳು. ಈ ಸಂಬಂಧ ವೆಂಕಟರಮಣನ್ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಿಲಾಡಿ ಕಳ್ಳಿ: ನಸುಕಿನಲ್ಲಿ ವಾಯುವಿಹಾರ ಮಾಡುವ ವೃದ್ಧರ ಅಡ್ಡಗಟ್ಟುತ್ತಿದ್ದ ಆಶಾ, ಪೊಲೀಸ್ ಅಧಿಕಾರಿ ಎಂದು ಸುಳ್ಳು ಹೇಳಿ ಬೆದರಿಸಿ ಚಿನ್ನಾಭರಣ ಮತ್ತು ಹಣ ಕಿತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿದ್ದಳು.
ಮಾದಕವಾಗಿ ಡ್ರೆಸ್ ಮಾಡಿಕೊಂಡು ರಸ್ತೆಬದಿ ವಾಹನ ನಿಲ್ಲಿಸಿ ಕೊಂಡು ಒಂಟಿ ಯುವಕರತ್ತ ನಗೆ ಬೀರುತ್ತಿದ್ದಳು. ಯುವಕರು ಹತ್ತಿರ ಬರುತ್ತಿದ್ದಂತೆ ಪುಸಲಾಯಿಸಿ ತನ್ನ ವಾಹನದಲ್ಲಿಯೇ ಕರೆದೊಯ್ದು, ಸ್ವಲ್ಪ ದೂರ ಹೋದ ಬಳಿಕ ತಾನು ಮಹಿಳಾ ಪೊಲೀಸ್ ಎಂದು ಹೇಳಿಕೊಳ್ಳುತ್ತಿದ್ದಳು.
ಒಂಟಿ ಮಹಿಳೆಯರನ್ನು ಚುಡಾಯಿಸುತ್ತೀಯಾ ಎಂದು ಹೆದರಿಸಿ, ಜೀಪ್ ಕಳುಹಿಸಿ ಎಂದು ಠಾಣೆಗೆ ಕರೆ ಮಾಡಿದಂತೆ ನಟಿಸಿ ಅರವ ಬಳಿ ಇದ್ದ ಹಣ, ಚಿನ್ನಾಭರಣ ಸುಲಿಗೆ ಮಾಡುತ್ತಿದ್ದಳು.
ಅಲ್ಲದೇ ವೇಶ್ಯೆಯಂತೆ ರಸ್ತೆ ಬದಿ ನಿಂತು ಕಾರಿನಲ್ಲಿ ಬರುವ ವ್ಯಕ್ತಿಗಳ ಜತೆ ಹೋಗುತ್ತಿದ್ದ ಆರೋಪಿ, ಸ್ವಲ್ಪ ದೂರ ಹೋದ ಬಳಿಕ ಅತ್ಯಾಚಾರಕ್ಕೆ ಯತ್ನಿಸುತ್ತಿರುವುದಾಗಿ ಕೂಗಿಕೊಂಡು ಜನ ಸೇರಿಸುವುದಾಗಿ ಬೆದರಿಸಿ ಹಣ ಮತ್ತು ಆಭರಣ ದೋಚುತ್ತಿದ್ದಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.