ಬೆಂಗಳೂರು: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿಜ್ಞಾನದ ಮೂಲಕ ಕಾಮನ್‌ವೆಲ್ತ್ ದೇಶಗಳು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಆರಂಭದಿಂದಲೂ ಕಾಮನ್‌ವೆಲ್ತ್ ದೇಶಗಳ ಮೂಲಕ ದೇಶದ ಅಭಿವೃದ್ಧಿಗೆ ಬುನಾದಿ ಹಾಕುವ ಕೆಲಸವನ್ನು ಭಾರತ ಮಾಡುತ್ತಿದೆ.
ಆದರೆ ಇಂದು ತುರ್ತಾಗಿ ಆರೋಗ್ಯ ಹಾಗೂ ನೀರಿನ ವಿಚಾರದಲ್ಲಿ ಕಾಮನ್‌ವೆಲ್ತ್ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಿದ್ದು, ಇದಕ್ಕೆ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ವೇದಿಕೆ ಮಾಡಿಕೊಳ್ಳಬೇಕಿದೆ ಎಂದು ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ 'ಕಾಮನ್‌ವೆಲ್ತ್ ವಿಜ್ಞಾನ ಸಮ್ಮೇಳನ'ಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾದಿ ದಿ ರಾಯಲ್ ಸೊಸೈಟಿ ಲಂಡನ್ ವತಿಯಿಂದ ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಮನ್‌ವೆಲ್ತ್ ದೇಶಗಳ ಬೃಹತ್ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿದೆ. ಒಟ್ಟು 52 ದೇಶಗಳ ಖ್ಯಾತ ವಿಜ್ಞಾನಿಗಳು ಭಾಗವಹಿಸಿದರು.
ಮೊದಲ ಪ್ರಯತ್ನದಲ್ಲಿಯೇ ಮಂಗಳಯಾನದಲ್ಲಿ ಯಶಸ್ವಿಯಾಗಿ ಭಾರತ ತನ್ನ ಸಾಮಾರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿದೆ. ನ್ಯಾನೋ ತಂತ್ರಜ್ಞಾನದಲ್ಲಿ ಸಿ.ಎನ್.ಆರ್.ರಾವ್ ಹಾಗೂ ಇತರ ವಿಜ್ಞಾನಿಗಳು ಛಾಪು ಮೂಡಿಸಿದ್ದಾರೆ. ದೇಶದ ವಿಜ್ಞಾನ ನಗರಿ ಎಂದು ಖ್ಯಾತಿಯಾಗಿರುವ ಬೆಂಗಳೂರು ವಿಶ್ವಕ್ಕೆ ಮಾದರಿಯಾಗುವಂತೆ ಸಂಶೋಧನಾ ಕೆಲಸದಲ್ಲಿ ನಿರತವಾಗಿದೆ.
ಭಾರತದ ಮೊದಲ ಪ್ರಧಾನಿ ನೆಹರು ಹೇಳಿದಂತೆ ಭವಿಷ್ಯವು ವಿಜ್ಞಾನದಲ್ಲಿದೆ. ನಾವು ವಿಜ್ಞಾನದೊಂದಿಗೆ ಸ್ನೇಹ ಬೆಳೆಸಬೇಕು. ಆದರೆ ಈ ಸ್ನೇಹವು ಸಮಾಜ ಕಟ್ಟುವ ನಿಟ್ಟಿನಲ್ಲಿರಬೇಕು ಎಂದು ಅವರು ತಿಳಿಸಿದರು.
ದೇಶ ಕಟ್ಟುವ ವಿಜ್ಞಾನಬೇಕು
19 ಹಾಗೂ 20ನೇ ಶತಮಾನದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳು ದೊಡ್ಡ ಬದಲಾವಣೆ ಕಂಡವು. ಆದರೆ ಆ ಸಂಶೋಧನೆಗಳು ನಾನಾ ಯುದ್ಧ ಹಾಗೂ ಸಮಸ್ಯೆಗಳಿಗೆ ಕಾರಣವಾದವು. ಆದರೆ ಇಂದು ದೇಶಕಟ್ಟುವ ನಿಟ್ಟಿನಲ್ಲಿ ವಿಜ್ಞಾನ ಬೆಳೆಯಬೇಕಿದೆ.
ಭಾರತವು ಈ ನಿಟ್ಟಿನಲ್ಲಿ ತನ್ನ ಅಭಿಪ್ರಾಯವನ್ನು ಜಾಗತಿಕವಾಗಿ ಸ್ಪಷ್ಟಪಡಿಸಿದೆ. ಈ ಶತಮಾನದ ವಿಜ್ಞಾನವು ಮಾನವ ಹಾಗೂ ದೇಶವನ್ನು ಬೆಳೆಸುವ ನಿಟ್ಟಿನಲ್ಲಿರಬೇಕು ಎನ್ನುವುದು ನಮ್ಮ ವಾದವಾಗಿದೆ ಎಂದು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಹೇಳಿದರು.