50 ಶಾಲೆಗಳಿಗೆ ಇ -ಶೌಚಾಲಯ
ಪ್ರಧಾನಿ ಮೋದಿ ಅವರ ಸ್ಪಚ್ಛ ಭಾರತ ಅಭಿಯಾನಕ್ಕೆ ಬೆಂಬಲ ನೀಡಿರುವ ಸಂಸದ ರಾಜೀವ್ ಚಂದ್ರಶೇಖರ್...
ಬೆಂಗಳೂರು: ಪ್ರಧಾನಿ ಮೋದಿ ಅವರ ಸ್ಪಚ್ಛ ಭಾರತ ಅಭಿಯಾನಕ್ಕೆ ಬೆಂಬಲ ನೀಡಿರುವ ಸಂಸದ ರಾಜೀವ್ ಚಂದ್ರಶೇಖರ್, ಬಿಬಿಎಂಪಿ ವ್ಯಾಪ್ತಿಯ 50 ಶಾಲೆಗಳಿಗೆ ಇ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದ್ದಾರೆ.
ಅಭಿಯಾನದ ಅಂಗವಾಗಿ ದೇಶದ ಎಲ್ಲ ಶಾಲೆಗಳೂ ಕಡ್ಡಾಯ ಶೌಚಾಲಯ ಹೊಂದಬೇಕು ಎಂದು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ಹೇಳಿದ್ದರು. ಈ ನಿಟ್ಟಿನಲ್ಲಿ ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳು ನೆರವಿಗೆ ಬರುವಂತೆಯೂ ಪ್ರಧಾನಿ ಕರೆ ನೀಡಿದ್ದರು. ಇದಕ್ಕೆ ಓಗೊಟ್ಟಿರು ರಾಜೀವ್, ಆದ್ಯತೆ ಮೇರೆಗೆ 50 ಶಾಲೆಗಳಲ್ಲಿ ಅತ್ಯಾಧುನಿಕ 100 ಇ-ಶೌಚಾಲಯ ನಿರ್ಮಿಸಿ ಕೊಡಲು ನಿರ್ಧರಿಸಿದ್ದಾರೆ.
ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಆ ಶೌಚಾಲಯಗಳನ್ನು ನೀಡಲಾಗುತ್ತದೆ. ಮೊದಲ ಹೆಜ್ಜೆಯಾಗಿ ಹಲಸೂರಿನವ ಜೋಗು ಪಾಳ್ಯದಲ್ಲಿರುವ ಹೆಣ್ಣುಮಕ್ಕಳ ಪ್ರೌಢ ಶಾಲೆ ಹಾಗೂ ಶಿವಾಜಿನಗರದ ಡಿಸ್ಪೆನ್ಸರಿ ರಸ್ತೆಯಲ್ಲಿರುವ ಪ್ರೌಢ ಶಾಲೆಯಲ್ಲಿ ಇ-ಶೌಚಾಲಯ ನಿರ್ಮಿಸಲಾಗುವುದು. ಎಲ್ಲ 50 ಶಾಲೆಗಳಲ್ಲಿ ಓದುತ್ತಿರುವ 20 ಸಾವಿರಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ಇದರ ಲಾಭ ದೊರೆಯಲಿದ್ದು, ಮುಂದಿನ 2 ವರ್ಷಗಳಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ.
ಈ ಹಿಂದೆಯೂ ರಾಜೀವ ತಮ್ಮ ಪ್ರದೇಶಾಭಿವೃದ್ಧಿ ನಿಧಿಯನ್ನು ಶಾಲೆಗಳ ಕಟ್ಟಡ ನಿರ್ಮಾಣಕ್ಕಾಗಿ ವಿನಿಯೋಗಿಸಿದ್ದರು. ಉತ್ತರಹಳ್ಳಿ, ಶಿವಾಜಿನಗರ ಸೇರಿದಂತೆ ನಗರದ ನಾನಾ ಪ್ರದೇಶಗಳಲ್ಲಿ ಶಾಲಾ ಕಟ್ಟಡ ನಿರ್ಮಾಣ, ಕಂಪ್ಯೂಟರ್ ಕಲಿಕಾ ಕೇಂದ್ರ ಹಾಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.