ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸಾರಿಗೆ ಸಂಸ್ಥೆ ಲಾಭಕ್ಕೆ 'ಖಾಸಗಿ' ಸಂಚಕಾರ

Lingaraj Badiger
Updated On : 3 Oct 2014, 3:56 am

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ಉದ್ದೇಶದಿಂದ, ತುಮಕೂರು ಮಾರ್ಗದಲ್ಲಿ ಸಾಗಿ, ರಾಜ್ಯದ ಇತರ ಭಾಗಗಳಿಗೆ ಸಂಪರ್ಕ ಕಲ್ಲಿಸುವ ಸರ್ಕಾರಿ ಬಸ್‌ಗಳನ್ನು ಪೀಣ್ಯ ಬಸ್ ನಿಲ್ದಾಣಕ್ಕೆ ವರ್ಗಾಯಿಸಲಾಗಿದೆ. ಆದರೆ, ಖಾಸಗಿ ಬಸ್‌ಗಳಿಗೆ ಇದು ಅನ್ವಯವಾಗಿಲ್ಲ. ಇದರಿಂದ ಸಂಚಾರ ದಟ್ಟಣೆ ನಿವಾರಿಸುವ ಪ್ರಕ್ರಿಯೆಗೆ ಅಡ್ಡಗಾಲು ಆಗುತ್ತಿರವುದಲ್ಲದೇ, ರಾಜ್ಯ ಸಾರಿಗೆ ಸಂಸ್ಥೆಗೆ ಆರ್ಥಿಕ ನಷ್ಟವಾಗುತ್ತಿದೆ.

ಪೀಣ್ಯ ನೂತನ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಈಗ, ಕರಾವಳಿ ಸೇರಿದಂತೆ ಉತ್ತರ ಕರ್ನಾಟಕದ 20 ಜಿಲ್ಲೆಗಳಿಗೆ ಸಂಪರ್ಕ ಕಲ್ಲಿಸುವ ಒಟ್ಟು 1345 ರಸ್ತೆ ಸಾರಿಗೆ ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ವರ್ಗಾವಣೆ ಆಗಲಿವೆ. ಈಗ ಅಲ್ಲಿಂದ ಹೊರಡುವ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್ಸುಗಳ ಸಂಖ್ಯೆ 350ರ ಗಡಿ ದಾಟಿದೆ. ಇನ್ನು ಶೇ.60ರಷ್ಟು ಬಸ್ಸುಗಳು ವರ್ಗಾವಣೆ ಆಗಬೇಕಿದೆ. ಆದೆರ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಪೈಪೋಟಿ ನೀಡುವಂತೆ ಸಂಚರಿಸುತ್ತಿರುವ ಖಾಸಗಿ ಬಸ್ಸುಗಳಿಗೂ ಸ್ಥಳಾಂತರಗೊಳ್ಳಲು ಸೂಚನೆ ಯಾಕೆ ನೀಡಲಾಗಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ. ಖಾಸಗಿ ಬಸ್‌ಗಳಿಗೂ ಪೀಣ್ಯದಲ್ಲೇ ಬಸ್‌ಸ್ಟ್ಯಾಂಡ್ ಆಗಿ, ಅವೂ ಪೀಣ್ಯಕ್ಕೇ ವರ್ಗಾವಣೆಗೊಂಡರೇ ನಗರದಲ್ಲಿ ವಾಹನ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಹಾಗೂ ಸಾರಿಗೆ ಸಂಸ್ಥೆಯ ನಷ್ಟವನ್ನು ತಪ್ಪಿಸಬಹುದು.

ನಷ್ಟ ಹೇಗೆ? ನಗರದ ಮೆಜೆಸ್ಟಿಕ್ ಪ್ರದೇಶದಿಂದ ದಿನಂಪ್ರತಿ ಸರಿ ಸುಮಾರು 500ಕ್ಕು ಹೆಚ್ಚು ಖಾಸಗಿ ಬಸ್ಸುಗಳು ಪೀಣ್ಯ ಮಾರ್ಗವಾಗಿ ಹೊರಡುತ್ತವೆ. ಇವು ಮಂಗಳೂರು, ಉಡುಪಿ, ಕಾರವಾರ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗಾ, ರಾಯಚೂರು, ಬಳ್ಳಾರಿ ಸೇರಿದಂತೆ ಇತರೆ ಜಿಲ್ಲಾ ಕೇಂದ್ರಗಳಿಗೆ ತೆರಳುತ್ತವೆ. ದೂರದ ಮುಂಬೈ ಹಾಗೂ ಪುಣೆಗೂ ಬೆಸುಗೆ ಹಾಕುವ ಬಸ್ಸುಗಳೂ ಇಲ್ಲಿಂದಲೇ ಹೊರಡುತ್ತವೆ. ಸರ್ಕಾರಿ ಬಸ್‌ಗಳಿಗೆ ಹೋಲಿಸಿದರೆ, ಪ್ರಯಾಣ ದರ ಖಾಸಗಿಯಲ್ಲಿ ಕಡಿಮೆ. ಹಾಗಾಗಿ, ಪ್ರಯಾಣಿಕರು ಈ ಬಸ್‌ಗಳಿಗೆ ಮುಗಿಬೀಳುವುದು ಸಹಜ. ಇದೀಗ ಸರ್ಕಾರಿ ಬಸ್‌ಗಳೂ ಮೆಜೆಸ್ಟಿಕ್‌ನಿಂದ ಹೊರಡುತ್ತಿಲ್ಲವಾದ್ದರಿಂದ ಖಾಸಗಿ ಬಸ್‌ಗಳಿಗೆ ಈ ಸುಗ್ಗಿಯಾಗಿದೆ. ರಾಜ್ಯ ಸಾರಿಗೆ ಬಸ್ಸುಗಳನ್ನು ದೂರದ ಪೀಣ್ಯ ಕಡೆ ತಳ್ಳಿ, ಖಾಸಗಿಯವರಿಗೆ ಮೆಜೆಸ್ಟಿಕ್‌ನಿಂದಲೇ ಹೊರಡಲು ಬಿಟ್ಟರೆ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು ಪೀಣ್ಯದಿಂದ ಖಾಲಿ ಹೊರಡಬೇಕಿದೆ. ಈ ಬಗ್ಗೆ ಸಾರಿಗೆ ಸಂಸ್ಥೆ ಗಮನ ಹರಿಸಬೇಕಿದೆ.

-ದೇಶಾದ್ರಿ ಹೊಸ್ಮನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement