ಜಿಲ್ಲಾ ಸುದ್ದಿ

ಮೊಬೈಲ್ ಫೋನ್‌ನಿಂದಾಗಿ ಸಿಕ್ಕಿಬಿದ್ದ ಹಂತಕ ದಂಪತಿ

ಬೆಂಗಳೂರು: ಕಲಾಸಿಪಾಳ್ಯ ಮುಖ್ಯರಸ್ತೆ ಆರ್.ಕೆ.ಲಾಡ್ಜ್ ಸಮೀಪದ ಫುಟ್‌ಪಾತ್ ಮೇಲೆ ರುಂಡ, ಕೈ ಕಾಲು ಇಲ್ಲದ ಶವ ಪತ್ತೆ ಪ್ರಕರಣ ಸಂಬಂಧ ದಂಪತಿಯನ್ನು ಕಲಾಸಿಪಾಳ್ಯ ಪೋಲೀಸರು ಬಂಧಿಸಿದ್ದಾರೆ.

ಕೊಲೆಯಾದ ವ್ಯಕ್ತಿ ತಮಿಳುನಾಡು ಕೃಷ್ಣಗಿರಿ ಜಿಲ್ಲೆ ಡೆಂಕಣಕೋಟೆ ನಿವಾಸಿ ಸಮೀವುಲ್ಲಾ ಚಾನು (35) ಎಂದು ಗುರುತಿಸಲಾಗಿದೆ. ಈತನ ಕೊಲೆಗೈದ ಮಂಗಮ್ಮಮನಪಾಳ್ಯ ಮದೀನ ನಗರ ನಿವಾಸಿ ರೇಷ್ಮಾ(30), ಪತಿ ಮುಖ್ತಿಯಾರ್ (45) ಬಂಧಿತರು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಗ್ಗ, ಚಾಕು, ಮಚ್ಚು ಹಾಗೂ ಎಕ್ಲಲ್ ಬ್ಲೇಡ್‌ನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಯಾದ ಸಮೀವುಲ್ಲಾ ಹಾಗೂ ರೇಷ್ಮಾ ನಡುವಿನ ಅನೈತಿಕ ಸಂಬಂಧ ಹಾಗೂ ಹಣಕಾಸಿನ ವೈಮನಸ್ಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಮುಖ್ತಿಯಾರ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ, ಪತ್ನಿ ರೇಷ್ಮಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ದಂಪತಿ ಮದೀನ ನಗರದ ಅಬ್ದುಲ್ಲಾ ಎಂಬುವರ ಮನೆಯಲ್ಲಿ ಬಾಡೆಗೆಗಿದ್ದರು.

ಡೆಂಕಣಕೋಟೆ ಮೂಲದ ರೇಷ್ಮಾ ಹಾಗೂ ಕೊಲೆಯಾದ ಸಮೀವುಲ್ಲಾ ಸಂಬಂಧಿಕರು. ಲಾರಿ ಚಾಲಕನಾಗಿದ್ದ ಸಮೀವುಲ್ಲಾ ಆಗಾಗ ರೇಷ್ಮಾಳನ್ನು ಭೇಟಿ ಮಾಡಿಕೊಂಡು ಹೋಗುತ್ತಿದ್ದ. ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆಯುತ್ತಿತ್ತು.

ಆದರೆ, ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಸಮೀವುಲ್ಲಾ ಸಾವಿರಾರು ರುಪಾಯಿಯನ್ನು ರೇಷ್ಮಾಳಿಗೆ ನೀಡಿದ್ದ, ಆದರೆ, ರೇಷ್ಮಾ ಮರಳಿಸದ ಕಾರಣ ಜಗಳವಾಗಿತ್ತು. ಅ.2 ರಂದು ಮಧ್ಯಾಹ್ನ ರೇಷ್ಮಾಳಿಗೆ ಕರೆ ಮಾಡಿದ ಸಮೀವುಲ್ಲಾ ಹಣ ನೀಡುವಂತೆ ಹೇಳಿದಾಗ, ರಾತ್ರಿ ಬರುವಂತೆ ರೇಷ್ಮಾ ಹೇಳಿದ್ದಳು. ಹೀಗಾಗಿ ಸಂಜೆ ರೇಷ್ಮಾ ಮನೆಗೆ ಸಮೀವುಲ್ಲಾ ಹೋಗಿದ್ದ. ಈ ವೇಳೆ ಪತಿ ಮುಖ್ತಿಯಾರ್ ಕೂಡಾ ಮನೆಯಲ್ಲಿದ್ದು ಮಾತುಕತೆ ನಡೆಸುತ್ತಿದ್ದ ವೇಳೆ ಮೂವರ ನಡುವೆ ಜಗಳವಾಗಿದೆ. ಆಗ, ದಂಪತಿ, ಸಮೀವುಲ್ಲಾನನ್ನು ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ.

ಬಾತ್‌ರೂಮ್‌ನಲ್ಲಿ ಕತ್ತರಿಸಿದರು: ಮನೆ, 3ನೇ ಮಹಜಿಯಲ್ಲಿದ್ದ ಕಾರಣ ಶವ ಸಾಗಿಸುವಾಗ ಅಕ್ಕ ಪಕ್ಕ ಮನೆಯವರಿಗೆ ಅನುಮಾನ ಬರಬಹುದು ಎಂದು ಭಾವಿಸಿ ರಾತ್ರಿವರೆಗೂ ಕಾದಿದ್ದಾರೆ. ನಂತರ ಶವವನ್ನು ಮನೆಯ ಬಾತ್ ರೂಮಿಗೆ ತೆಗೆದುಕೊಂಡು ಹೋಗಿ ಚಾಕು, ಮಚ್ಚು, ಹಾಗೂ ಎಕ್ಸಲ್ ಬ್ಲೇಡ್‌ನಿಂದ ಕತ್ತು, ಕೈ, ಕಾಲುಗಳನ್ನು ಕತ್ತರಿಸಿ ಪ್ರತ್ಯೇಕಿಸಿದ್ದಾರೆ.
ಅ.3 ರಂದು ಬೆಳಿಗ್ಗೆ ತಲೆ ಹಾಗೂ ಕೈಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಹೋಗಿ ಜೆ.ಜೆ.ನಗರ ಸಮೀಪದ ರಾಜಕಾಲುವೆಯಲ್ಲಿ ಬಿಸಾಡಿದ್ದಾರೆ. ಮತ್ತೊಮ್ಮೆ ಮನೆಗೆ ಬಂದು ಮುಂಡ ಹಾಗೂ ಕಾಲುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಆಟೋದಲ್ಲಿ ಕಬ್ಬನ್‌ಪೇಟೆಗೆ ಬಂದಿದ್ದಾರೆ. ಪುಟ್‌ಪಾತ್ ಮೇಲೆ ಚಿಲ ಇಟ್ಟು ಪ್ರಯಾಣಿಕರಂತೆ ಕೆಲಹೊತ್ತು ನಟಿಸಿ ಅಲ್ಲಿಂದ ಪರಾರಿಯಾಗಿದ್ದರು.

ಕೆಲ ಹೊತ್ತಿನ ಬಳಿಕ ಮಾಂಸದ ವಾಸನೆಗೆ ನಾಯಿಗಳು ಚೀಲವನ್ನು ಎಳೆದಾಡಿವೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಚೀಲ ತೆರೆದು ಮುಂಡ ಇರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂಡ ಹಾಗೂ ಕಾಲುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ ಅದು ಮುಸ್ಲಿಂ ವ್ಯಕ್ತಿಯ ಶವ ಎನ್ನುವುದು ಪತ್ತೆಯಾಗಿತ್ತು. ಕೂಡಲೇ ಪೊಲೀಸರು, ಶವದ ಮೇಲಿನ ಗುರುತುಗಳ ಬಗ್ಗೆ ಉರ್ದು ಪತ್ರಿಕೆಗೆ ಮಾಹಿತಿ ನೀಡಿದ್ದರು.

ಉರ್ದು ಪತ್ರಿಕೆ ಗಮನಿಸಿದ ಸಮೀವುಲ್ಲಾ ಸ್ನೇಹಿತರು ಸಹೋದರ ಸಾದಿಕ್ ಹಾಗೂ ಆತನ ಪತ್ನಿ ತಾಸೀನಾಗೆ ತಿಳಿಸಿದ್ದಾರೆ. ಇಬ್ಬರು ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಶವದ ಮೇಲಿನ ಚಹರೆಗಳ ಆಧಾರದ ಮೇಲೆ ಸಮೀವುಲ್ಲಾ ಎಂದು ಗುರುತಿಸಿದ್ದಾರೆ.
ಈ ವೇಳೆ ಸಮೀವುಲ್ಲಾ ಮೊಬೈಲ್ ಫೋನ್ ಸಂಖ್ಯೆ ಪಡೆದು ಒಳ ಬಂದ ಹಾಗೂ ಹೊರ ಹೋದ ಕರೆಗಳನ್ನು ಪರಿಶೀಲಿಸಿದಾಗ ಆರೋಪಿಗಳಾದ ರೇಷ್ಮಾ ಹಾಗೂ ಮುಖ್ತಿಯಾರ್ ನಂಬರ್‌ಗಳು ಸಿಕ್ಕಿದೆ. ಅಲ್ಲದೇ ಆರೋಪಿಗಳು ಕಲಾಸಿಪಾಳ್ಯಕ್ಕೆ ಬಂದಿರುವುದು ಟವರ್ ಲೋಕೇಶನ್‌ನಿಂದ ಪತ್ತೆಯಾಗದೆ. ಇಬ್ಬರನ್ನೂ ಠಾಣೆಗೆ ಕರೆತಂದು ವಿಚಾರಿಸಿದಾಗ ಘಟನೆಯನ್ನು ವಿವರಿಸಿದ್ದಾರೆ.
ಪ್ರಕರಣ ಪತ್ತೆ ಹಚ್ಚಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಶ್ಲಾಘಿಸಿದ್ದಾರೆ.

ಕೈ, ಕಾಲು, ತಲೆ ಕತ್ತರಿಸಲು 3 ತಾಸು!
ದಂಪತಿ ಚಾಕು, ಮಚ್ಚು ಹಾಗೂ ಎಕ್ಸಲ್ ಬ್ಲೇಡ್ ಬಳಸಿ ನಸುಕಿನ 4 ರಿಂದ 7ರ ವರೆಗೆ ಸಮೀವುಲ್ಲಾನ ತಲೆ, 2 ಕಾಲು, 2 ಕೈಗಳನ್ನು ಕತ್ತಿರಿಸಿದ್ದಾರೆ. ತಲೆ ಹಾಗೂ ಕೈಗಳನ್ನು ಗೌರಿಪಾಳ್ಯ ಸಮೀಪದ ರಾಜ ಕಾಲುವೆಯಲ್ಲಿ ಬಿಸಾಡಿದ್ದಾರೆ. ಆದರೆ, ಎರಡು ದಿನಗಳಿಂದ ರಾತ್ರಿ ವೇಳೆ ಸುರಿದ ಮಳೆಗೆ ತಲೆ ಹಾಗೂ ಕಾಲುಗಳು ಎಲ್ಲಿವರೆಗೂ ಕೊಚ್ಚಿಕೊಂಡು ಹೋಗಿದೆ ಎನ್ನುವುದು ತಿಳಿದುಬಂದಿಲ್ಲ, ಅವುಗಳನ್ನು ಹುಡುಕುವ ಪ್ರಯತ್ನ ನಡೆದಿದೆ ಎಂದು ಪೋಲೀಸರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್