ಕಾಡಿಗೆ ಮರಳಿದ ಗಜಪಡೆ
ಶಿಬಿರಗಳಿಗೆ ತೆರಳಿದ 11 ಆನೆಗಳು! ಏಕಾಂಗಿಯಾಗಿ ಪಯಣಿಸಿದ ಅರ್ಜುನ
ಮೈಸೂರು: ದಸರಾ ಜಂಬೂ ಸವಾರಿಯನ್ನು ಯಶಸ್ವಿಯಾಗಿ ಪೂರೈಸಿದ ಗಜಪಡೆಯ ಮಂಗಳವಾರ ಮತ್ತೆ ಕಾಡಿನತ್ತ ಪಯಣ ಬೆಳೆಸಿತು.
ಮೂರು ತಂಡಗಳಲ್ಲಿ ಮೈಸೂರಿಗೆ ಆಗಮಿಸಿದ್ದ 14 ಆನೆಗಳ ಪೈಕಿ 11 ಆನೆಗಳು ಕಾಡಿಗೆ ಹೋದವು. ಉಳಿದ ಮೂರು ಆನೆಗಳು ಲಾರಿ ಸಮಸ್ಯೆಯಿಂದಾಗಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು, ಇಂದು ಹೊರಡಲಿವೆ.
ಚಿನ್ನದ ಅಂಬಾರಿ ಹೊತ್ತ ಅರ್ಜುನ ಆನೆಯು ಏಕಾಂಗಿಯಾಗಿ ಬಳ್ಳೆ ಆನೆ ಶಿಬಿರಕ್ಕೆ ತೆರಳಿದೆ. ಬಲರಾಮ, ಅಭಿಮನ್ಯು, ಮೇರಿ, ವರಲಕ್ಷ್ಮಿ ಮತ್ತು ಗೋಪಾಲಸ್ವಾಮಿ ತಿತಿಮತಿ ಆನೆ ಶಿಬಿರಕ್ಕೆ ಹೋಗಿವೆ.
ವಿಕ್ರಮ, ಹರ್ಷ, ಗೋಪಿ, ಪ್ರಶಾಂತ ಮತ್ತು ಕಾವೇರಿ ಆನೆಗಳನ್ನು ದುಬಾರೆ ಆನೆ ಶಿಬಿರಕ್ಕೆ ಲಾರಿಯಲ್ಲಿ ಕಳುಹಿಸಲಾಗಿದೆ. ಮೂರು ತಂಡಗಳಲ್ಲಿ ಆಗಮಿಸಿ ಅರಮೆ ಆವರಣದಲ್ಲಿ ಬಿಡಾರ ಹೂಡಿದ್ದ ಗಜಪಡೆಗೆ ಪ್ರತಿನಿತ್ಯ ರಾಜಾತಿಥ್ಯ ಸಿಗುತ್ತಿತ್ತು. ಕಾಡಿನಲ್ಲಿ ತಮಗೆ ಬೇಕಾದ ಆಹಾರವನ್ನು ತಾವೇ ಹುಡುಕಿಕೊಂಡು ಹೋಗುತ್ತಿದ್ದ ಆನೆಗಳು, ನಾಡಿನಲ್ಲಿ ಪೌಷ್ಟಿಕ ಆಹಾರವನ್ನು ನಿಂತಲ್ಲೇ ಮೇಯ್ದು ತೂಕ ಹೆಚ್ಚಿಸಿಕೊಂಡಿದ್ದವು.
ಬೀಳ್ಕೋಡುಗೆ: ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿ ಕಬ್ಬು, ಬೆಲ್ಲ, ತೆಂಗಿನಕಾಯಿ ನೀಡಿ ಉಪಚರಿಸಿ ಬೀಳ್ಕೊಟ್ಟರು. ಇದೇ ವೇಳೆ ಶ್ರೀನಿವಾಸಪ್ರಸಾದ್ ಅಭಿಮಾನಿಗಳ ಬಳಗದಿಂದ ಮಾವುತರು ಮತ್ತು ಕಾವಾಡಿಗಳಿಗೆ ಬಟ್ಟೆ ವಿತರಿಸಲಾಯಿತು. ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ 47 ಮಂದಿ ಆನೆ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಮತ್ತು ವಿಶೇಷ ಕಾವಾಡಿಗಳಿಗೆ ಜಿಲ್ಲಾಡಳಿತ ವತಿಯಿಂದ ತಲಾ ರು. 5000 ಗೌರವಧನ ವಿತರಿಸಲಾಯಿತು.