ಮಾರ್ಚ್ಗೆ ರಾಜ್ಯದ ರಸ್ತೆಗಳು ಗುಂಡಿ ಮುಕ್ತ
ಬೆಂಗಳೂರು: ರಾಜ್ಯ ಹೆದ್ದಾರಿ ಸೇರಿ 60 ರಿಂದ 65 ಸಾವಿರ ಕಿ.ಮೀ ರಸ್ತೆಯ ನಿರ್ವಹಣೆ ಹಾಗೂ ಗುಂಡಿ ಮುಚ್ಚಲು ರು. 500 ಕೋಟಿ ಬಿಡುಗಡೆ ಮಾಡಲಾಗಿದೆ. ಶೀಘ್ರ ಕಾಮಗಾರಿ ಪ್ರಾರಂಭವಾಗಲಿದ್ದು, ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಲಿವೆ ಎಂದು ಲೋಕಪಯೋಗಿ ಸಚಿವ ಡಾ.ಎಚ್.ಸಿ ಮಹದೇವಪ್ಪ ತಿಳಿಸಿದ್ದಾರೆ.
ಮಳೆಗಾಲ ಅಂತ್ಯವಾಗುತ್ತಿದ್ದು, ರಸ್ತೆಗಳಿಗೆ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಚಿವರು ಸುದ್ದಿಗಾರರಿಗೆ ಮಂಗಳವಾರ ವಿವರ ನೀಡಿದರು. 1998 ರಿಂದ ಪ್ರಕ್ರಿಯೆಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಕೋಡ್ ಅನ್ನು ವಿಮರ್ಶಿತ ಡಿ-ಕೋಡ್ ಆಗಿ ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಪಾರದರ್ಶಕವಾಗಿ ಇಲಾಖೆಯ ಕಾಮಗಾರಿಗಳು ಹಾಗೂ ಅದರ ಪ್ರಕ್ರಿಯೆಗಳು ನಡೆಯಲಿವೆ.
ಕಾಮಗಾರಿಗೆ ಸಂಬಂಧಿಸಿದಂತೆ ಎಂಜಿನಿಯರ್ಗಳ ಜವಾಬ್ದಾರಿ ನಿಗದಿಪಡಿಸಲಾಗಿದೆ. ಅಲ್ಲದೆ, ಮಾಹಿತಿ ತಂತ್ರಜ್ಞಾನದಡಿ ರಸ್ತೆಗಳ ಮಾಹಿತಿ ದಾಖಲಿಸಲಾಗುತ್ತದೆ. ಇ-ಪ್ರೊಕ್ಯೂರ್ಮೆಂಟ್, ಇ-ಬಿಲ್ಲಿಂಗ್, ಜಿಪಿಎಸ್ ಆಧರಿತ ರಸ್ತೆಗಳ ಸ್ಥಿತಿ ಸಮೀಕ್ಷೆ ನಡೆಸಲಾಗುತ್ತದೆ. ರಸ್ತೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ 2013ರ ಕಾಯ್ದೆ ಅಳವಡಿಸಲಾಗಿದೆ.
ರಸ್ತೆ ನಿರ್ಮಾಣಕ್ಕೆ ಮುನ್ನ ಯುಟಿಲಿಟಿ ವ್ಯವಸ್ಥೆಗಳನ್ನು ಪೂರ್ಣಗೊಳಿಸುವುದೂ ಕಡ್ಡಾಯ. ಈ ಎಲ್ಲ ನಿಯಮ ಪಾಲಿಸದ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.
ಬೆಂಗಳೂರಿಗೆ ಸಮಗ್ರ ಯೋಜನೆ
ಬೆಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಇದನ್ನು ಸುಗಮಗೊಳಿಸಲು ಎಲ್ಲ ಇಲಾಖೆ ಅಧಿಕಾರಿಗಳು ಸೇರಿದಂತೆ ಸಚಿವರ ಸಮಿತಿ ಲೋಕೋಪಯೋಗಿ ಖಾತ ಸಚಿವ ಡಾ.ಎಚ್.ಸಿ ಮಹದೇವಪ್ಪ ಅಧ್ಯಕ್ಷತೆಯಲ್ಲಿ ರಚನೆಯಾಗಿದೆ. ನಗರದಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸಲು ಕೈಗೊಳ್ಳಬೇಗಾದ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ತಿಂಗಳಲ್ಲಿ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ, ನಂತರ ಅದನ್ನು ಅನುಷ್ಠಾನಗೊಳಿಸಲಾಗುತ್ತದೆ. ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿಯೂ ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗಿದೆ. ಎರಡೂ ಸಮಿತಿ ಸೇರಿ ನಗರದ ವಾಹನ ದಟ್ಟಣೆ ಕಡಿಮೆಗೊಳಿಸಲು ರಸ್ತೆಗಳ ಅಭಿವೃದ್ಧಿ, ವಿಸ್ತರಣೆ ಸೇರಿದಂತೆ ಕೈಗೊಳ್ಳಬಹುದಾದ ಕ್ರಮಗಳನ್ನು ಪರಿಶೀಲಿಸಲಾಗಿದೆ. ರಾತ್ರಿ ವೇಳೆ ಸ್ಥಳ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ತಂತ್ರಜ್ಞಾನ ಬಳಸಿಕೊಂಡು ಹೇಗೆ ನಗರದ ರಸ್ತೆಗಳನ್ನು ದಟ್ಟಣೆಯಿಂದ ಮುಕ್ತಗೊಳಿಸಬಹುದು ಎಂಬ ಬಗ್ಗೆ ವರದಿ ತಯಾರಿಸಲಾಗುತ್ತದೆ ಎಂದು ಸ್ವತಃ ಸಚಿವರು ತಿಳಿಸಿದರು.