ಸ್ವಚ್ಛ ಭಾರತಕ್ಕೊಂದು ಆ್ಯಪ್!
ಹೆಸರಿಗೆ ಸಿಲಿಕಾನ್ ಸಿಟಿ, ಆದರೆ ಇಲ್ಲಿಯ ಆಡಳಿತ ಸುಧಾರಣೆ ಅಥವಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾತ್ರ...
ಬೆಂಗಳೂರು: ಹೆಸರಿಗೆ ಸಿಲಿಕಾನ್ ಸಿಟಿ, ಆದರೆ ಇಲ್ಲಿಯ ಆಡಳಿತ ಸುಧಾರಣೆ ಅಥವಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾತ್ರ ಈ ತಂತ್ರಜ್ಞಾನ ಬಳಕೆಯೇ ಆಗುವುದಿಲ್ಲ. ಸರ್ಕಾರಿ ಅಧಿಕಾರಿಗಳಿಗೆ ತಂತ್ರಜ್ಞಾನವೆಂದರೆ ಅಲರ್ಜಿ!
ಆದಾಗ್ಯೂ ದಿ ಫಾರ್‌ವರ್ಡ್ ಫೌಂಡೇಶನ್ ಸಂಸ್ಥೆ ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ 'ಸ್ವಚ್ಛ ಭಾರತ ಸ್ವಚ್ಛ ಬೆಂಗಳೂರು' ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಸರ್ಕಾರ ಅಥವಾ ಬಿಬಿಎಂಪಿಗೆ ಇಂತಹದೊಂದು ಅವಕಾಶದ ಬಗ್ಗೆ ಆಲೋಚಿಸಲೂ ಸಮಯ ಸಿಕ್ಕಿಲ್ಲ.
ಗೂಗಲ್ ಪ್ಲೇನಲ್ಲಿ 'ಸ್ವಚ್ಛ ಭಾರತ ಸ್ವಚ್ಛ ಬೆಂಗಳೂರು' ಅ್ಯಪ್ ಲಭ್ಯವಿದ್ದು, ಆ್ಯಂಡ್ರಾಯ್ಡ್ ಬಳಕೆದಾರರು ಉಚಿತವಾಗಿ ಈ ಅಪ್ಲಿಕೇಷನ್‌ನನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಸಮರ್ಪಕ ಕಸ ವಿಲೇವಾರಿ ಹಾಗೂ ಮ್ಯಾಪಿಂಗ್‌ನ ನಿರ್ದಿಷ್ಟ ಉದ್ದೇಶಕ್ಕಾಗಿ ಈ ಆ್ಯಪ್ ರೂಪಿಸಲಾಗಿದೆ. ಬಿಬಿಎಂಪಿ ಹಾಗೂ ಕಸ ವಿಲೇವಾರಿ ಮಾಡುವ ಗುತ್ತಿಗೆದಾರರನ್ನು ಜಾಗೃತಗೊಳಿಸಲು ಈ ಆ್ಯಪ್ ನೆರವಿಗೆ ಬರಲಿದೆ. ಇದರ ಜತೆಗೆ ಮ್ಯಾಪಿಂಗ್ ಮಾಡುವ ಪ್ರಕ್ರಿಯೆಗೆ ಇದು ನೆರವಾಗುತ್ತದೆ. ಈ ಆ್ಯಪ್ ಬಳಸಲು ಕಡ್ಡಾಯವಾಗಿ ಆ್ಯಂಡ್ಯಾಯ್ಡ್ ಸ್ಮಾರ್ಟ್‌ಫೋನ್, ಅಂತರ್ಜಾಲ ಸಂಪರ್ಕ ಹೊಂದಿರಬೇಕು. ಪ್ರತಿಷ್ಠಾನದ ಮೊದಲ ಪ್ರಯತ್ನದಿಂದ ಕಸ ಬಿದ್ದಿರುವ ಅಥವಾ ಲಿಟರ್ ಸ್ಪಾಟ್‌ನ್ನು ಗುರಿತಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಬೆಂಗಳೂರಿಗರು ಇದನ್ನು ಸಮರ್ಪಕವಾಗಿ ಬಳಸಿಕೊಂಡರೆ 10 ಸಾವಿರಕ್ಕೂ ಹೆಚ್ಚಿರುವ ಲಿಟರ್ ಸ್ಪಾಟ್‌ಗಳು ಇಲ್ಲದಂತೆ ಮಾಡಲು ಸಾಧ್ಯವಿದೆ.
ಆ್ಯಪ್ ಕಾರ್ಯನಿರ್ವಹಣೆ ಹೇಗೆ?
'ಸ್ವಚ್ಛ ಭಾರತ ಸ್ವಚ್ಛ ಬೆಂಗಳೂರು' ಆ್ಯಪ್ ಓಪನ್ ಮಾಡಿದಾಗ ಒಂದಿಷ್ಟು ಅಂಶಗಳಿರುವ ಪುಟ ಸಿಗುತ್ತದೆ. ಆಗ ಕಡ್ಡಾಯವಾಗಿ ಜಿಪಿಎಸ್ ಆನ್ ಮಾಡಿರಬೇಕು. ಏಕೆಂದರೆ ನೀವು ತೆಗೆಯುವ ಲಿಟರ್ ಸ್ಪಾಟ್‌ನ ಪ್ರದೇಶವನ್ನು ಗುರುತಿಸಲು ಇದು ನೆರವಾಗುತ್ತದೆ. ಜಿಪಿಎಸ್ ಆನ್ ಆದ ಬಳಿಕ ನೇರವಾಗಿ ನಿಮ್ಮ ಪ್ರದೇಶ ಗುರುತಾಗುತ್ತದೆ. ನಂತರ ಆ ಲಿಟರ್ ಸ್ಪಾಟ್‌ಗಳ ಮಾದರಿಯನ್ನು ಅಲ್ಲಿ ದಾಖಲಿಸಿ ಸ್ಥಳ, ವಿವಿರ ಹಾಗೂ ನಿಮ್ಮ ಹೆಸರು ದಾಖಲಿಸಬೇಕು. ಆ ನಂತರ ಕ್ಯಾಮೆರಾ ಆನ್ ಆಗುತ್ತದೆ. ಚಿತ್ರ ಕ್ಲಿಕ್ಕಿಸಿದಾಗ ನೇರವಾಗಿ ಅದು 'ಸ್ವಚ್ಛ ಭಾರತ ಸ್ವಚ್ಛ ಬೆಂಗಳೂರು' ವೆಬ್‌ಸೈಟ್‌ನಲ್ಲಿ ಸೇವ್ ಆಗುತ್ತದೆ.
ಈ ಮಾಹಿತಿಯನ್ನು ಪ್ರತಿಷ್ಠಾನ ಪಡೆದುಕೊಂಡು ಲಿಟರ್ ಸ್ಪಾಟ್‌ಗಳ ಸಂಖ್ಯೆ ಕಡಿಮೆ ಮಾಡಲು ಬಿಬಿಎಂಪಿ ಜತೆ ಕೆಲಸ ಮಾಡುತ್ತದೆ. ಇದಕ್ಕಾಗಿ ಸ್ಥಳೀಯ ಜನರನ್ನು ಜಾಗೃತಗೊಳಿಸಿ ಕಸವನ್ನು ಎಸೆಯದೇ ಪೌರ ಕಾರ್ಮಿಕರಿಗೆ ಹಸ್ತಾಂತರಿಸುವಂತೆ ಮನವೊಲಿಸಲಾಗುತ್ತದೆ. ಇದನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಮತ್ತೊಂದು ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಪ್ರತಿಯೊಬ್ಬ ಪೌರ ಕಾರ್ಮಿಕ ಹಾಗೂ ಕಸ ವಿಲೇವಾರಿಯಾಲ್ಲಿ ಪಾಲ್ಗೊಳ್ಳುವ ವಾಹನಗಳನ್ನು ಟ್ರ್ಯಾಕ್ ಮಾಡಲು ನಿರ್ಧರಿಸಲಾಗಿದೆ.
ಆಗ ತಂತ್ರಜ್ಞಾನದ ಸಹಾಯದಿಂದ ಒಂದೆಡೆ ಲಿಟರ್ ಸ್ಪಾಟ್‌ಗಳನ್ನು ಕಡಿಮೆ ಮಾಡಬಹುದು. ಹಾಗೆಯೇ ಪೌರಕಾರ್ಮಿಕರ ಚಲನೆ ಗಮನಿಸಿ ಸಾರ್ವಜನಿಕರು ಕೂಡ ಸುಲಭವಾಗಿ ಮನೆಯ ಎದುರು ಕಸವನ್ನು ಕೊಡಬಹುದು. ಪ್ರತಿಷ್ಠಾನದ ಸ್ವಯಂ ಸೇವಕರು ಇದನ್ನು ಬಳಸಿದ ಬಳಿಕ ಸಾರ್ವಜನಿಕರಿಗೆ ನೀಡಲು ನಿರ್ಧರಿಸಲಾಗಿದೆ. ಆದರೆ ಇದು ಯಶಸ್ವಿಯಾಗಲು ಬಿಬಿಎಂಪಿಯ ಸಮಪೂರ್ಣ ಸಹಭಾಗಿತ್ವ ಅನಿವಾರ್ಯ.
ಆ್ಯಪ್ ಡೌನ್‌ಲೋಡ್ ಹೇಗೆ?
ಗೂಗಲ್ ಪ್ಲೇಗೆ ನೇರವಾಗಿ ಹೋಗಿ 'ಸ್ವಚ್ಛ ಭಾರತ ಸ್ವಚ್ಛ ಬೆಂಗಳೂರು' ಎಂದು ಶೋಧಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಫಾರ್ವಡ್ ಫೌಂಡೇಷನ್‌ನ www.sbsb.co.in
ಭೇಟಿ ನೀಡಿ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆ ಬಳಿಕ ನೊಂದಣಿ ಮಾಡಿಕೊಂಡು ಅಪ್ಸಿಕೇಷನ್‌ನ ಕೆಲಸ ಪ್ರಾರಂಭಿಸಬಹುದು. ಹೆಚ್ಚಿನ ಮಾಹಿತಿಗೆ 9886071019 ಸಂಪರ್ಕಿಸಬಹುದು.