ಪ್ರಸಾರ ಭಾರತಿ ಸಾರಥ್ಯಕ್ಕೆ ಕನ್ನಡಿಗ ಸೂರ್ಯಪ್ರಕಾಶ್?
ಅಂಕಣಕಾರ, ದೆಹಲಿ ಮೂಲದ ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್(ವಿಐಎಫ್)ನ...
ನವದೆಹಲಿ: ಅಂಕಣಕಾರ, ದೆಹಲಿ ಮೂಲದ ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಷನ್(ವಿಐಎಫ್)ನ ಗೌರವ ಸದಸ್ಯ ಕನ್ನಡಗ ಅರಕಲ ಗೂಡು ಸೂರ್ಯಪ್ರಕಾಶ್ ಅವರು ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹಾಸನದವರಾದ ಸೂರ್ಯಪ್ರಕಾಶ್, ಕನ್ನಡಪ್ರಭ ಪತ್ರಿಕೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.
ಪ್ರಸಾರ ಭಾರತಿ ಅಧ್ಯಕ್ಷರ ಆಯ್ಕೆ ಕುರಿತು ಈವರೆಗೂ ಯಾವುದೇ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಆದರೆ, ಬಲಪಂಥೀಯ, ಮಾಜಿ ಪತ್ರಕರ್ತರೂ ಆಗಿರುವ ಸೂರ್ಯಪ್ರಕಾಶ್ ನೇಮಕ ಬಹುತೇಕ ಖಚಿತ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಹಿಂದೂಸ್ತಾನ್ ಪತ್ರಿಕೆಯ ಮಾಜಿ ಸಂಪಾದಕಿ ಮೃಣಾಲ್ ಪಾಂಡೆ ಅಧಿಕಾರಾವಧಿ ಏ.30ಕ್ಕೆ ಕೊನೆಗೊಂಡಿದೆ. ಐದು ತಿಂಗಳಿಂದ ಖಾಲಿ ಬಿದ್ದಿರುವ ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯ ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಸೂರ್ಯಪ್ರಕಾಶ್ ಅವರಲ್ಲದೆ ಹಿಂದೆ ಪ್ರಸಾರ ಭಾರತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಗಿದ್ದ ಒ.ಪಿ. ಕೇಜ್ರಿವಾಲ್, ಮಾಜಿ ಪತ್ರಕರ್ತ, ಬಿಜೆಪಿ ಮುಖಂಡ ಬಲ್ಬೀಲ್ಪುಂಜ್ ಹಾಗೂ ಹಿರಿಯ ಪತ್ರಕರ್ತ ಸ್ವಪನ್ದಾಸ್ ಗುಪ್ತಾ ಅವರ ಹೆಸರೂ ಈ ಹುದ್ದೆಗೆ ಕೇಳಿ ಬಂದಿದೆ.
ಒಂದು ವೇಳೆ ಸೂರ್ಯ ಪ್ರಕಾಶ್ ಆಯ್ಕೆಯಾದರೆ ಪ್ರಸಾರ ಭಾರತಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಎರಡನೇ ಕನ್ನಡಿಗ ಎನ್ನು ಗೌರವಕ್ಕೆ ಪಾತ್ರವಾಗಲಿದ್ದಾರೆ. ಈ ಹಿಂದೆ ಹಿರಿಯ ಪತ್ರಕರ್ತ ಎಂ.ವಿ.ಕಾಮತ್ ಅವರು ಪ್ರಸಾರ ಭಾರತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.