ಮತ್ತೆ ಕಾಡಿದ ಮಳೆ, ಹಳ್ಳ ಹಿಡಿದ ಜನಜೀವನ
ಬುಧವಾರ ರಾತ್ರಿ ಸುರಿದ ಭಾರಿ ಮಳೆ ಮತ್ತೆ ಬೆಂಗಳೂರನ್ನು ಕಾಡಿತು. ರಜಾ ದಿನವಾದ್ದರಿಂದ ಮತ್ತು ...
ಬೆಂಗಳೂರು: ಬುಧವಾರ ರಾತ್ರಿ ಸುರಿದ ಭಾರಿ ಮಳೆ ಮತ್ತೆ ಬೆಂಗಳೂರನ್ನು ಕಾಡಿತು. ರಜಾ ದಿನವಾದ್ದರಿಂದ ಮತ್ತು ವಾಹನ ಸಂಚಾರ ಕಡಿಮೆ ಇರುವ ಸಮಯವಾಗಿದ್ದರಿಂದ ಸಂಚಾರ ಅಸ್ತವ್ಯಸ್ತ ಆಗಲಿಲ್ಲ.
ಆದರೆ ಯಥಾಪ್ರಕಾರ ರಸ್ತೆಗಳಲ್ಲಿ ನೀರು ನಿಂತಿತ್ತು. ಮನೆಗಳಿಗೆ ನೀರು ನುಗ್ಗಿತ್ತು. ಗಾಳಿ ಆಂಜನೇಯ ಮತ್ತೆ ನೀರಲ್ಲಿ ಮುಳುಗಿದ
ಸೆ.25 ರಂದು ಸುರಿದ ಮಹಾಮಳೆಯಿಂದ ಉಂಟಾದ ಸ್ಥಿತಿಗೂ ಬುಧವಾರದ ಸ್ಥಿತಿಗೂ ಹೆಚ್ಚಿನ ವ್ಯತ್ಯಾಸ ಕಾಣಲಿಲ್ಲ. ಆ ಮಳೆಯ ಪರಿಣಾಮದಿಂದಲೂ ಯಾವುದೇ ಬದಲಾವಣೆ ಆಗಿಲ್ಲ ಎಂಬುದಕ್ಕೆ ಬುಧವಾರ ರಾತ್ರಿಯ ಮಳೆ ಪುರಾವೆ ನೀಡಿತು.
ರಸ್ತೆಗಳು ಹಳ್ಳಗಳಂತಾದರೆ, ತಗ್ಗು ಪ್ರದೇಶಗಳು ಕೆರೆಗಳಾಗಿದ್ದವು. ಹಲವು ಮನೆಗಳಿಗೆ ನೀರು ನುಗ್ಗಿದ್ದು, ಹಲವೆಡೆ ಮರಗಳು ಧರೆಗೆ ಉರುಳಿದ್ದವು. ರಸ್ತೆ ಯಾವುದು, ಹೊಂಡ ಯಾವುದು ಗುರುತಿಸಲು ಸಾಧ್ಯವಾಗದೆ ವಾಹನ ಸವಾರರು ಪರದಾಟ ಅನುಭವಿಸಿದರು. ಪಾದರಾಯನಪುರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಸಂಕಷ್ಟ ಎದುರಿಸಿದರು. ಮೈಸೂರು ರಸ್ತೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಎಂದಿನಂತೆ ನೀರು ನುಗ್ಗಿತು.
ಜಯನಗರ, ಚಾಮರಾಜಪೇಟೆ, ಬಿಟಿಎಂ ಬಡಾವಣೆಯಲ್ಲಿ ಮರಗಳು ಉರುಳಿ ಬಿದ್ದವೆ.
ಮೆಜೆಸ್ಟಿಕ್, ಗಾಂಧಿನಗರದಲ್ಲಿ ಸುರಿದ ಭಾರಿ ಮಳೆಯಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ನೃಪತುಂಗ ರಸ್ತೆ, ಕೆ.ಆರ್.ವೃತ್ತ, ಆನಂದರಾವ್ ವೃತ್ತದ ಸಮೀಪದ ರೈಲ್ವೆ ಮೇಲ್ಸೇತುವೆ ಕೆಳಗೆ ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ತಡೆಹಿಡಿಯಲಾಗಿತ್ತು. ಅಲ್ಲದೇ ಸೇತುವೆ ಕೆಳಗೆ ಅಳವಡಿಸಿರುವ ನೀರಿನ ಪಂಪ್ಗಳು ನೀರು ಪಂಪ್ ಮಾಡುತ್ತಿದ್ದುದರಿಂದ ಹಿಂದಿನಂತೆ ನೀರು ತುಂಬಿಕೊಳ್ಳಲಿಲ್ಲ. ವಾಹನಗಳು ಬೇರೆ ಮಾರ್ಗ ಹಿಡಿದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
ಆನೆಪಾಳ್ಯ, ಆಡುಗೋಡಿ, ಶಾಂತಿನಗರ, ಶೇಷಾದ್ರಿಪುರ, ಬಾಪೂಜಿನಗರ, ಈಜಿಪುರ, ಮಾಗಡಿರಸ್ತೆ, ಇಂದಿರಾನಗರ, ಚಾಮರಾಜಪೇಟೆ, ರಾಜಾಜಿನಗರ, ಕೆ.ಆರ್,ವೃತ್ತ, ಬಸವೇಶ್ವರ ನಗರ, ಪೀಣ್ಯ, ವಿಜಯನಗರ, ಕಾಮಾಕ್ಷಿಪಾಳ್ಯ, ಹಲಸೂರು ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ನಿವಾಸಿಗಳು ಕಷ್ಟ ಅನುಭವಿಸಿದರು.
ಮೆಜೆಸ್ಟಿಕ್, ಓಕಳಿಪುರ, ಏರ್ಪೋರ್ಟ್ ರಸ್ತೆ, ಹೆಬ್ಬಾಳ, ಮೈಸೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ, ಮಲ್ಲೇಶ್ವರ, ಮಾಗಡಿ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು ವಾಹನ ಸವಾರರು ಪರದಾಡಿದರು. ನಗರದ ಎಲ್ಲಾ ಪ್ರದೇಶಗಳಲ್ಲೂ ಸುರಿದ ಧಾರಾಕಾರ ಮಳೆಗೆ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡಿದರು. ದಾರಿ ಮಧ್ಯದಲ್ಲಿ ವಾಹನಗಳನ್ನು ನಿಲ್ಲಿಸಿ ಆಸರೆಗಾಗಿ ಕಟ್ಟಡಗಳು, ಮೇಲ್ಸೇತುವೆ ಕೆಳಗೆ ನಿಂತಿದ್ದರು. ಟೌನ್ಹಾಲ್ ಕಡೆಯಿಂದ ಸಿರ್ಸಿ ಮೇಲ್ಸೇತುವೆ ಮೂಲಕ ಮೈಸೂರು ರಸ್ತೆಯಲ್ಲಿ ತೆರಳುತ್ತಿದ್ದ ಜನರು ವಾಹನ ದಟ್ಟಣೆಯಿಂದ ಪರದಾಡಿದರು.
ಹುಡ್ಹುಡ್ ಪ್ರಭಾವ ಇನ್ನೆರಡು ದಿನ ಮಳೆ
ಹುಡ್ಹುಡ್ ಚಂಡಮಾರುತ ಹಿನ್ನೆಲೆಯಲ್ಲಿ ಮುಂದಿನ 36 ತಾಸುಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಸುಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಡಿಶಾ, ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸುರಿಸುತ್ತಿರುವ ಹುಡ್ಹುಡ್ ಚಂಡಮಾರುತ ರಾಜ್ಯಕ್ಕೂ ಕಾಲಿಟ್ಟ ಪರಿಣಾಮ ಈ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗಲಿದೆ.