ನಿತ್ಯಾನಂದ ಧ್ವನಿ ಪರೀಕ್ಷೆ ವರದಿ ಸಿಐಡಿಗೆ
ನ್ಯಾಯಾಲಯದ ಆದೇಶದಂತೆ ಇತ್ತೀಚೆಗಷ್ಟೇ ಬಿಡದಿ ನಿತ್ಯಾನಂದ ಸ್ವಾಮಿಯ ಧ್ವನಿ ಪರೀಕ್ಷೆ ನಡೆಸಿದ ವಿಧಿ...
ಬೆಂಗಳೂರು: ನ್ಯಾಯಾಲಯದ ಆದೇಶದಂತೆ ಇತ್ತೀಚೆಗಷ್ಟೇ ಬಿಡದಿ ನಿತ್ಯಾನಂದ ಸ್ವಾಮಿಯ ಧ್ವನಿ ಪರೀಕ್ಷೆ ನಡೆಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ವರದಿಯನ್ನು ಸಿಐಡಿಗೆ ಸಲ್ಲಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆ ನಡೆದ ದಿನವೇ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಿತ್ಯಾನಂದನ ಧ್ವನಿ ಪರೀಕ್ಷೆ ನಡೆಸಲಾಗಿತ್ತು.
ಚಿತ್ರನಟಿ ರಂಜಿತಾ ಜತೆಗಿನ ರಾಸಲೀಲೆ ಸಿ.ಡಿಯಲ್ಲಿರುವ ಧ್ವನಿ ಮತ್ತು ಕಾರು ಚಾಲಕ ಲೆನಿನ್ ಕುರಪ್ಪನ್ ಜತೆ ಸಂಧಾನದ ಮಾತುಕತೆ ಹಾಗೂ ಬೆದರಿಕೆ ಹಾಕಿದ್ದಾರೆನ್ನಲಾದ ಸಿ.ಡಿಯಲ್ಲಿರುವ ಧ್ವನಿಗೆ ನಿತ್ಯಾನಂದ ಸ್ವಾಮಿ ಧ್ವನಿ ಶೇ.80 ಹೋಲಿಕೆಯಾಗುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ತಾನು ಬಾಲಕನಾಗಿದ್ದು ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯ ಇಲ್ಲ ಎಂದು ನಿತ್ಯಾನಂದ ಸ್ವಾಮಿ ನ್ಯಾಯಾಲಯದಲ್ಲಿ ಹೇಳಿಕೆನೀಡಿದ್ದ. ಬಾಲಕರ ಧ್ವನಿ ಹಾಗೂ ಪುರುಷರ ಧ್ವನಿಯಲ್ಲಿ ವ್ಯತ್ಯಾಸ ಇರುತ್ತದೆ.
ಹೀಗಾಗಿ, ಅದನ್ನು ಖಚಿತಪಡಿಸಿಕೊಳ್ಳಲು ನಿತ್ಯಾನಂದನಿಗೆ ಧ್ವನಿ ಪರೀಕ್ಷೆ ನಡೆಸಲಾಗಿದ್ದು ಅದು ಪುರುಷ ಧ್ವನಿ ಎನ್ನುವುದು ಖಚಿತವಾಗಿದೆ. ಈ ವರದಿಯನ್ನು ಸಿಐಡಿ ಅಧಿಕಾರಿಗಳು ರಾಮನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.