ಪೀಠತ್ಯಾಗ ಪರಿಶೀಲನೆ ಮಾಡುವೆ: ಮೂಜಗು
ಮೂರು ಸಾವಿರ ಮಠದ ಉನ್ನತ ಸಮಿತಿ ಎದುರು ತಾವು ಪೀಠ ತ್ಯಾಗ ಮಾಡುವ ನಿರ್ಧಾರ ವ್ಯಕ್ತಪಡಿಸಿದ್ದು ನಿಜವೆಂದು ಕೊನೆಗೂ...
ಹುಬ್ಬಳ್ಳಿ: ಮೂರು ಸಾವಿರ ಮಠದ ಉನ್ನತ ಸಮಿತಿ ಎದುರು ತಾವು ಪೀಠ ತ್ಯಾಗ ಮಾಡುವ ನಿರ್ಧಾರ ವ್ಯಕ್ತಪಡಿಸಿದ್ದು ನಿಜವೆಂದು ಕೊನೆಗೂ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ. ಆದರೆ, ತಮ್ಮ ಈ ನಿರ್ಧಾರವನ್ನು ಮರು ಪರಿಶೀಲಿಸಿ, ಇನ್ನೆರಡು ದಿನದಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ. ಈ ಮೂಲಕ ವಿವಾದ ಮತ್ತಷ್ಟು ಕಗ್ಗಂಟಾಗಿದೆ.
ಗುರುವಾರ ಮಧ್ಯರಾತ್ರಿ ನಂತರ ಹುಬ್ಬಳ್ಳಿಗೆ ತಿಪಟೂರಿನಿಂದ ಆಗಮಿಸಿದ ಸ್ವಾಮೀಜಿ, ಶುಕ್ರವಾರ ಬೆಳಗ್ಗೆ ಅಸ್ವಸ್ತಗೊಂಡವರಂತೆ ಕಂಡುಬಂದರು. ಬೆಳಗ್ಗೆ ಸ್ನಾನ, ಪೂಜಾವಿಧಿ ಪೂರ್ಣಗೊಳಿಸಿದ ಮೇಲೆ ಶ್ರೀ ಮಠದಲ್ಲಿ ಭೇಟಿಯಾದ ಪತ್ರಕರ್ತರ ಜತೆ ಮಾತನಾಡಿದ ಅವರು, ಉನ್ನತ ಸಮಿತಿ ಹಾಗೂ ಭಕ್ತರೊಂದಿಗೆ ಚರ್ಚಿಸಿ, ಬಳಿಕ ನಿರ್ಧಾರ ಕೈಗೊಳ್ಳುವೆ ಎಂದರು.
ಈ ಹಿಂದೆ ಪೀಠತ್ಯಾಗದ ಇಂಗಿತ ವ್ಯಕ್ತಪಡಿಸಿದ್ದು ನಿಜ. ಆದರೆ, ಘಟಪ್ರಭಾ ಹಾಗೂ ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಗಳಿಂದಾಗಿ ನಿರ್ಧಾರವನ್ನು ಮರುಪರಿಶೀಲಿಸುವೆ ಎಂದು ಹೇಳಿದರು.
ಪೀಠತ್ಯಾಗ ಹಾಗೂ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಯಾರೂ ಒತ್ತಡ ಹೇರಿಲ್ಲ. ಈ ಹಿಂದೆ ತಾವು ದಿಂಗಾಲೇಶ್ವಾರ ಸ್ವಾಮೀಜಿ ಅವರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕೆಂಬ ಇಚ್ಛಾಶಕ್ತಿ ಪ್ರಕಟಿಸಿದ್ದು ಸತ್ಯ ಎಂದರು.
ತಮ್ಮನ್ನು ಯಾರೂ ಅಪಹರಿಸಿಲ್ಲವೆಂದು ಸ್ಪಷ್ಟನೆ ನೀಡಿದ ಮೂಜಗು, ಶ್ರೀ ಮಠದ ಉತ್ತರಾಧಿಕಾರಿ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ರುದ್ರಮುನಿ ಸ್ವಾಮೀಜಿ ಅವರೊಂದಿಗೆ ಚರ್ಚಿಸಲು ತಾವು ತಿಪಟೂರಿಗೆ ಹೋಗಿದ್ದಾಗಿ ತಿಳಿಸಿದರು.