ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಾನವ ಹಕ್ಕುಗಳ ಆಯೋಗಕ್ಕೆ ಇನ್ನು ಆನ್‌ಲೈನ್‌ನಲ್ಲೇ ದೂರು

ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ...

Mainashree
Updated On : 14 Oct 2014, 10:24 am

ಬೆಂಗಳೂರು: ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ದೂರು ನೀಡಲು ಇನ್ನು ಮುಂದೆ ಮಾನವ ಹಕ್ಕು ಆಯೋಗದ ಕಚೇರಿ ತನಕ ಬರಬೇಕಿಲ್ಲ. ಅಂತರ್ಜಾಲದ ವ್ಯವಸ್ಥೆಯಿದ್ದರೆ ನಿಮ್ಮ ಊರುಗಳಲ್ಲಿಯೇ ಕುಳಿತು ದೂರು ಸಲ್ಲಿಸಬಹುದು.

ಅಷ್ಟೇ ಅಲ್ಲ, ನೀವು ನೀಡಿದ ದೂರು ಆಯೋಗದಲ್ಲಿ ಸ್ವೀಕಾರವಾದ ಬಗ್ಗೆ ಮತ್ತು ವಿಚಾರಣೆಯ ಪ್ರಗತಿಯ ವಿವರ ಸೇರಿದಂತೆ ಪ್ರತಿಯೊಂದು ಮಾಹಿತಿಯೂ ಸ್ಥಳದಲ್ಲಿಯೇ ಲಭ್ಯ.

ಸಾರ್ವಜನಿಕರ ಅಲೆದಾಟ ತಪ್ಪಿಸುವುದಕ್ಕಾಗಿ ರಾಜ್ಯ ಮಾನವ ಹಕ್ಕು ಆಯೋಗ ಆನ್‌ಲೈನ್ ಮೂಲಕವೇ ದೂರು ಪಡೆಯಲು ಮುಂದಾಗಿದೆ. ಇದಕ್ಕಾಗಿ ರಾಷ್ಟ್ರೀಯ ಆಯೋಗದ ಮೂಲಕ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ) ದಿಂದಲೂ ಅನುಮತಿ ಪಡೆದುಕೊಂಡಿದೆ.

ಈ ತಿಂಗಳ 17ರಂದೇ ಆನ್‌ಲೈನ್ ವ್ಯವಸ್ಥೆಗೆ ಚಾಲನೆಯೂ ಸಿಗಲಿದೆ. ಒಂದು ವರ್ಷದ ಪ್ರಯತ್ನದ ಫಲವಾಗಿ ಆಯೋಗವು ಈ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ದೂರುದುಮ್ಮಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ಈಗಾಗಲೇ ರಾಜ್ಯ ಮಾನವ ಹಕ್ಕು ಆಯೋಗ ತನ್ನ ವೆಬ್‌ಸೈಟ್ ಹೊಂದಿದೆ. ಅಲ್ಲಿ ಆಯೋಗದ ಕಾರ್ಯಚಟುವಟಿಕೆ ದೂರು ಸ್ವೀಕಾರದ ವಿಧಾನ, ಆಯೋಗದ ಕಾರ್ಯವ್ಯಾಪ್ತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ನೀಡಿದೆ. ಆದರೆ, ಇದು ಆರಂಭ ಶೂರತ್ವ ಎನ್ನುವ ಹಾಗಾಗಿದೆ. ಆಯೋಗಕ್ಕೂ ಒಂದು ವೆಬ್‌ಸೈಟ್ ಇದೆ ಎನ್ನುವುದನ್ನು ಬಿಟ್ಟರೆ, ಅಲ್ಲಿ ಆಯೋಗದ ಲೇಟೆಸ್ಟ್ ಮಾಹಿತಿಗಳೇ ಸಿಗುವುದಿಲ್ಲ. ಹೀಗಾಗಿ, ವೆಬ್‌ಸೈಟನ್ನು ಸಕ್ರಿಯಗೊಳಿಸುವುದರ ಜೊತೆಗೆ ಪ್ರತ್ಯೇಕ ಆನ್‌ಲೈನ್ ವ್ಯವಸ್ಥೆಯಲ್ಲಿ ದೂರು ಸ್ವೀಕಾರ, ವಿಚಾರಣೆ ಪ್ರಗತಿಯ ಸಂಪೂರ್ಣ ಮಾಹಿತಿ ನೀಡಲು ಆಯೋಗ ಮುಂದಾಗಿದೆ.

60ರಿಂದ 70 ದೂರು: ಜನರಲ್ಲಿ ಜಾಗೃತಿ ಮೂಡಿದ ನಂತರ ಮಾನವ ಹಕ್ಕು ಆಯೋಗಕ್ಕೆ ಬರುವ ದೂರುಗಳ ಸಂಖ್ಯೆ ದುಪ್ಪಟ್ಟಾಗಿದೆ. ಬೆಂಗಳೂರಿನ ಬಹುಮಹಡಿ ಕಟ್ಟಡದ ಬಳಿಯಿರುವ ಆಯೋಗದ ಕಚೇರಿಯಲ್ಲಿ ಪ್ರತಿ ನಿತ್ಯ 60ರಿಂದ 70ರಷ್ಟು ದೂರುಗಳು ದಾಖಲಾಗುತ್ತಿವೆ.

ಅಲ್ಲದೇ, ಆಯೋಗವೇ ತನ್ನ ಅಧಿಕಾರಿ ಚಲಾಯಿಸಿ, ನಾಗರಿಕ ಹಕ್ಕುಗಳ ಉಲ್ಲಂಘನೆ ದೂರುಗಳನ್ನು ದಾಖಲಿಸಿಕೊಳ್ಳುತ್ತಿದೆ. ದೂರುಗಳನ್ನು ವಿಲೇವಾರಿ ಮಾಡಲು ಆನ್‌ಲೈನ್ ವ್ಯವಸ್ಥೆ ಹೆಚ್ಚು ಸಹಾಯಕವಾಗಲಿದೆ ಎಂದು ಆಯೋಗದ ಸಿಬ್ಬಂದಿ ಹೇಳುತ್ತಾರೆ.

ಪ್ರಕರಣಗಳ ವಿಲೇವಾರಿಗೂ ಆಯೋಗ ವಿಶೇಷ ಆದ್ಯತೆ ನೀಡಿದೆ. ನಿವೃತ್ತ ಐಎಎಸ್ ಅಧಿಕಾರಿ ಮೀರಾ ಸಕ್ಸೇನಾ ಅವರು ಆಯೋಗದ ಹಂಗಾಮಿ ಅಧ್ಯಕ್ಷರಾದ ನಂತರ ಸಾವಿರಾರು ಅರ್ಜಿಗಳ ಇತ್ಯರ್ಥ ಆಗಿದೆ. ಸರ್ಕಾರಿ ಭೂಮಿ ಒತ್ತುವರಿ ದೂರುಗಳ ವಿಚಾರಣೆಗೂ ಅವರು ನೋಟಿಸ್ ಜಾರಿ ಮಾಡುತ್ತಿದ್ದಾರೆ. ಹೀಗೆ ಆಯೋಗದ ಕಾರ್ಯಚಟುವಟಿಗೆ ಹೊಸತನ ನೀಡಿರುವ ಅವರು, ಈಗ ಆನ್‌ಲೈನ್ ವ್ಯವಸ್ಥೆ ಜಾರಿ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement