ಕಬ್ಬನ್ಪಾರ್ಕ್ಗೆ ಶೀಘ್ರ ಹೊಸ ಲುಕ್
ಕಬ್ಬನ್ಪಾರ್ಕ್ನಲ್ಲಿ ಬೋಡು ಬೋಡಾಗಿದ್ದ ಗುಲಾಬಿ ವನಕ್ಕೆ ಶೀಘ್ರದಲ್ಲೇ ಹೊಸ...
ಬೆಂಗಳೂರು: ಕಬ್ಬನ್ಪಾರ್ಕ್ನಲ್ಲಿ ಬೋಡು ಬೋಡಾಗಿದ್ದ ಗುಲಾಬಿ ವನಕ್ಕೆ ಶೀಘ್ರದಲ್ಲೇ ಹೊಸ ಲುಕ್ ಬರಲಿದೆ!
ಗುಲಾಬಿ ತೋಟದಲ್ಲಿ ಖಾಲಿ ಖಾಲಿಯಾಗಿದ್ದ ಜಾಗಕ್ಕೆ ಮೆಕ್ಸಿಕನ್ ಹುಲ್ಲುಹಾಸು ಹಾಕುವುದು, ಗಿಡಿಗಳ ವೈಜ್ಞಾನಿಕ ಮಾಹಿತಿ ಫಲಕಗಳನ್ನು ಅಳವಡಿಸುವುದು, ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ರು. 11 ಲಕ್ಷ ವೆಚ್ಚದಲ್ಲಿ ನಾನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಗುಲಾಬಿ ವನಕ್ಕೆ ವಿಶೇಷ ಮೆರುಗು ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಕಳೆದ ವರ್ಷವಷ್ಟೇ ಉದ್ಯಾನವ ಸೆಂಟ್ರಲ್ ಲೈಬ್ರರಿ ಮುಂಭಾಗದಲ್ಲಿ ಸುಮಾರು 3.5 ಎಕರೆ ವಿಸ್ತೀರ್ಣದಲ್ಲಿ ನೂರಾರು ಬಣ್ಣ ಮತ್ತು ತಳಿಯ ಗುಲಾಬಿ ಗಿಡಗಳ ವನವನ್ನು ನಿರ್ಮಿಸಲಾಗಿತ್ತು. ಎರಡು ಫಸಲು ಹೂವು ಕೂಡ ಬಿಟ್ಟಾಯಿತು. ಆದರೆ ತೋಟದ ಮಧ್ಯಭಾಗ ಖಾಲಿಯಿತ್ತು. ಜತೆಗೆ ಗಿಡಗಳ ನಡುವಿನ ಅಂತರದ ಜಾಗದಲ್ಲೂ ಖಾಲಿ ಖಾಲಿಯಿದ್ದುದರಿಂದ ಗುಲಾಬಿ ತೋಟಕ್ಕೆ ಕಳೆಯಿರಲಿಲ್ಲ. ಇದರ ನಡುವೆ ಕಳೆ ಬೆಳೆದು ತೋಟ ಕಳಾಹೀನವಾಗಿತ್ತು. ಹೀಗೆ ಅಂದ ಕಳೆದುಕೊಂಡಿದ್ದ ಗುಲಾಬಿ ವನವನ್ನು ವಿಶೇಷವಾಗಿ ಆಕರ್ಷಣೆಗೊಳಪಡಿಸಲಾಗುತ್ತಿದೆ.
ಹೊಸ ಲುಕ್ಗಾಗಿ ನಡೆಯುವ ಕೆಲಸಗಳು:
ಒಟ್ಟಾರೆ 3.5 ಎಕರೆ ವಿಸ್ತೀರ್ಣದ ಗುಲಾಬಿ ತೋಟದ ಪೈಕಿ 6,200 ಚದರ ಮೀಟರ್(ಒಂದೂವರೆ ಎಕರೆ) ಜಾಗಕ್ಕೆ ಮೆಕ್ಸಿಕನ್ ಹುಲ್ಲು ಹಾಸು ನೆಡಲಾಗುವುದು. ಇದರಲ್ಲಿ ರು. 4 ಲಕ್ಷ ವೆಚ್ಚದಲ್ಲಿ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತ್ಯೇಕ ಗಿಡಗಳಿಗೆ ಅವುಗಳ ಹೆಸರು, ವೈಜ್ಞಾನಿಕ ಹೆಸರು, ಅವುಗಳ ಮೂಲ, ಆ ತಳಿಯ ವಿಶೇಷತೆ ಇತ್ಯಾದಿಗಳ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು. ಇದೆಲ್ಲದರ ಒಟ್ಟಾರೆ ವೆಚ್ಚ ರು. 11 ಲಕ್ಷ. ಈಗಾಗಲೇ ಕೆಲಸಗಳು ಆರಂಭವಾಗಿವೆ. ಸುಮಾರು 20 ದಿನಗಳಲ್ಲಿ ಹುಲ್ಲುಹಾಸು ನಾಟಿ ಕಾರ್ಯ ಪೂರ್ಣಗೊಳ್ಳುತ್ತದೆ. ನಂತರ ತುಂತುರು ನೀರಾವರಿ, ಆನಂತರ ಮಾಹಿತಿ ಫಲಕಗಳನ್ನು ಅಳವಡಿಸುವುದು. ಹೀಗೆ ಎಲ್ಲಾ ಕಾರ್ಯಗಳು ಹಂತ ಹಂತವಾಗಿ ನಡೆದು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ಜನವರಿಯಲ್ಲಿ ಲಾಲ್ಬಾಗ್ನಲ್ಲಿ ನಡೆಯುವ ಫಲಪುಷ್ಫ ಪ್ರದರ್ಶನದ ವೇಳೆಗೆ ಕಬ್ಬನ್ಪಾರ್ಕ್ನಲ್ಲಿ ಸುಸಜ್ಜಿತ, ಸುಂದರ ಗುಲಾಬಿ ತೋಟ ವೀಕ್ಷಕರ ಆಕರ್ಷಣೆಗೆ ಸಿದ್ಧವಾಗಲಿದೆ.
- ನಯನ ಬಿ.ಜೆ