ಬದನವಾಳು ಹತ್ಯಾಕಾಂಡ: 13 ಜನರಿಗೆ ಶಿಕ್ಷೆ ಕಾಯಂ, ಏಳು ಜನ ಖುಲಾಸೆ
ಮೈಸೂರಿನ ಬದನವಾಳುವಿನಲ್ಲಿ 1993ರಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಹೈಕೋರ್ಟ್ 7 ಜನರನ್ನು...
ಬೆಂಗಳೂರು: ಮೈಸೂರಿನ ಬದನವಾಳುವಿನಲ್ಲಿ 1993ರಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಹೈಕೋರ್ಟ್ 7 ಜನರನ್ನು ಖುಲಾಸೆಗೊಳಿಸಿ 13 ಆರೋಪಿಗಳಿಗೆ ಅಧೀನ ನ್ಯಾಯಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
23 ಆರೋಪಿಗಳ ಪೈಕಿ, ವಿಚಾರಣೆ ಹಂತದಲ್ಲಿ 3 ಆರೋಪಿಗಳು ಸಾವಿಗೀಡಾಗಿದ್ದರು. ದೇವಸ್ಥಾನದ ಪ್ರವೇಶಕ್ಕೆ ಸಂಬಂಧಿಸಿದಂತೆ ವೀರಶೈವ ಮತ್ತು ದಲಿತರ ನಡುವಿನ ಸಂಘರ್ಷದಲ್ಲಿ 3 ಜನ ದಲಿತರನ್ನು ಮೇಲ್ಜಾತಿಯವರು ಕೊಲೆಗೈದಿದ್ದರು. ಅಧೀನ ನ್ಯಾಯಾಲಯ 2010 ನ.4ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ 20 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್. ಆನಂದ್ ಮತ್ತು ನ್ಯಾಯಮೂರ್ತಿ ಪ್ರದೀಪ್ ಡಿ. ವೈಂಗಣಕರ್ ಅವರ ವಿಭಾಗೀಯ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿದೆ. ಈ 7 ಜನರು ಪ್ರಕರಣದಲ್ಲಿ ಭಾಗಿಯಾಗಿರುವ ಸಾಕ್ಷ್ಯಾಧಾರಗಳಿಲ್ಲ. ಆದರೂ ಅಧೀನ ನ್ಯಾಯಾಲಯ ಇವರಿಗೆ ಜೀವಾವಧಿ ಶಿಕ್ಷೆ ನೀಡಿ ಪ್ರಮಾದ ಎಸಗಿರುವುದಾಗಿ ಆರೋಪಿ ಪರ ವಕೀಲರು ವಾದಿಸಿದ್ದರು. ಅಲ್ಲದೇ ಪ್ರಾಸಿಕ್ಯೂಷನ್ ಪರ ವಕೀಲರು ಇವರ ಮೇಲಿನ ಗುರುತರ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆಂದು ಪೀಠ ಅಭಿಪ್ರಾಯಪಟ್ಟು ಆರೋಪ ಮುಕ್ತಗೊಳಿಸಿದೆ. ಈ 7 ಜನರು ಬೇರೆ ಪ್ರಕರಣದಲ್ಲಿ ಭಾಗಿ ಆಗದಿದ್ದಲ್ಲಿ ಇವರನ್ನು ಬಿಡುಗಡೆಗೊಳಿಸಬಹುದು ಎಂದು ಪೀಠ ಆದೇಶಿಸಿದೆ.
ಘಟನೆಯಲ್ಲಿ ಸಾವನ್ನಪ್ಪಿದ ಮೂವರ ವಾರಸುದಾರರಿಗೆ ಶಿಕ್ಷೆಗೊಳಗಾಗಿರುವ 13 ಜನರು ತಲಾ ರು. 50 ಸಾವಿರ, ಗಾಯಗೊಂಡಿದ್ದ ಬಿ.ಜೆ ಸ್ವಾಮಿ ಅವರಿಗೆ ರು. 25 ಸಾವಿರ ಹಾಗೂ ಕೃಷ್ಣಮೂರ್ತಿ ಎಂಬುವರಿಗೆ ರು. 20 ಸಾವಿರ ಪರಿಹಾರ ನೀಡಬೇಕೆಂದು ಪೀಠ ಆದೇಶಿಸಿದೆ.
ಘಟನೆ ವಿವರ: ಬದನವಾಳು ಗ್ರಾಮದಲ್ಲಿನ ಸಿದ್ದೇಶ್ವರ ದೇವಸ್ಥಾನ ನವೀಕರಣಗೊಂಡ ನಂತರ ಉದ್ಘಾಟನೆಗೆ ದಲಿತರನ್ನು ಆಹ್ವಾನಿಸಿರಲಿಲ್ಲ. ಗಂಭೀರ ತಿರುವು ಪಡೆದುಕೊಂಡ ಈ ವಿಚಾರ ಅಂತಿಮವಾಗಿ ದೇವಸ್ಥಾನಕ್ಕೆ ಬೀಗ ಮುದ್ರೆ ಹಾಕಲಾಯಿತು. 1933 ಜ.30 ಶಾಂತಿ ಸಮಿತಿ ರಚಿಸಲಾಗಿತ್ತು. ಆದರಂತೆ 1933 ಫೆ.2ರಂದು ದಲಿತರು, ಪೊಲೀಸರ ಸಹಾಯ ಪಡೆದು ದೇವಸ್ಥಾನದ ಬೀಗ ಒಡೆದು ಒಳ ಪ್ರವೇಶಿಸಿದ್ದರು.
ಇದಾದ ನಂತರ 1993 ಮಾರ್ಚ್ 26 ರಂದು ದೇವಸ್ಥಾನದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದರ ಸಲುವಾಗಿ ದೇವಸ್ಥಾನದಿಂದ ಒಂದು ಕಿ.ಮೀ ದೂರದಲ್ಲಿ ಪ್ರಾಣಿ ಬಲಿ ಕೊಡಲು ದಲಿತ ಸಮುದಾಯ ನಿರ್ಧರಿಸಿತು. ಇದಕ್ಕೆ ಸಂಬಂಧಿಸಿದಂತೆ ಅನುಮತಿ ನೀಡುವಂತೆ ಪೊಲೀಸರಲ್ಲಿ ಮನವಿ ಸಲ್ಲಿಸಿದ್ದರು. ಇದರಿಂದ ರೊಚ್ಚಿಗೆದ್ದ ಮೇಲ್ಜಾತಿಯ ಜನ 1993 ಮಾ. 25ರಂದು ಹಣಿಯಂಬಳ್ಳಿ ಹಾಗೂ ಬದನವಾಳುವಿನ 1.5 ಕಿ.ಮೀ ಉದ್ದದ ರಸ್ತೆ ಮಾರ್ಗದಲ್ಲಿ ಪ್ರಭುಸ್ವಾಮಿ ಎಂಬುವರ ಜಮೀನಿನ ಹತ್ತಿರ ಹಲ್ಲೆ ನಡೆಸಿದರು. ಅಂದು ಕ್ರಿಕೆಟ್ ಪಂದ್ಯ ಮುಗಿಸಿ ವಾಪಸ್ ಆಗುತ್ತಿದ್ದ ದಲಿತ ವರ್ಗದವರ ಮೇಲೆ ಮೇಲ್ಜಾತಿ ಜನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಈ ಘಟನೆಯಲ್ಲಿ ಮಧುಕರ್, ನಟರಾಜ್ ಮತ್ತು ನಾರಾಯಣಸ್ವಾಮಿ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಶಿಕ್ಷಿತರು: ಸುರೇಶ್, ದಯಾನಂದ, ನಂಜುಂಡಸ್ವಾಮಿ, ಮಹದೇವಪ್ಪ, ಶಿವನಂಜಪ್ಪ, ಪ್ರಭುಸ್ವಾಮಿ, ಶ್ರೀಕಂಠಮೂರ್ತಿ, ನಾಗರಾಜು, ಬಿ.ಆರ್. ಉಮೇಶ್, ಕರಿಯಪ್ಪ, ಸ್ವಾಮಿ, ಶಿವಕುಮಾರ್ ಮತ್ತು ಶಿವಣ್ಣ.
ಖುಲಾಸೆಗೊಂಡವರು: ರೇವಣ್ಣ, ಬಸವಣ್ಣ, ರಾಜಶೇಖರ್, ಶಿವನಂದಸ್ವಾಮಿ, ಕೃಪಾಶಂಕರ್, ಶಿವರುದ್ರಪ್ಪ, ರೇವಣ್ಣ.