ಸೃಷ್ಟಿಗೆ ಬಿತ್ತು ಬೀಗ
ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಕೊಡಿಸುವುದಾಗಿ ಸಂತಾನಹರಿತ ದಂಪತಿಗೆ ವಂಚಿಸಿ...
ಬೆಂಗಳೂರು: ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಕೊಡಿಸುವುದಾಗಿ ಸಂತಾನಹರಿತ ದಂಪತಿಗೆ ವಂಚಿಸಿ ಪೊಲೀಸರಿಂದ ಬಂಧಿತನಾಗಿರುವ ಸೃಷ್ಟಿ ಗ್ಲೋಬಲ್ ಟ್ರಸ್ಟ್ ಮುಖ್ಯಸ್ಥ ಕೆ.ಟಿ ಗುರುಮೂರ್ತಿ ಆಸ್ಪತ್ರೆಗೆ ಬೀಗ ಬಿದ್ದಿದೆ.
ಕೆ.ಟಿ ಗುರುಮೂರ್ತಿ ಪೊಲೀಸರ ವಶದಲ್ಲಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಆಸ್ಪತ್ರೆ ಮುಚ್ಚಲು ನಿರ್ಧರಿಸಿದ್ದಾರೆ. ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆ ಒಂದು ತಿಂಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ಸೂಚನಾ ಫಲಕ ಹಾಕಲಾಗಿತ್ತು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿಗೆ ಬರುವವರ ಸಂಖ್ಯೆ ಸಂಪೂರ್ಣ ನಿಂತು ಹೋಗಿದ್ದು ಸಿಬ್ಬಂದಿ, 'ಆಸ್ಪತ್ರೆ ಮುಚ್ಚಲಾಗಿದೆ' ಎನ್ನುವ ಫಲಕ ಹಾಕಿಕೊಂಡಿದ್ದಾರೆ.
ಬಾಡಿಗೆ ತಾಯಿಯಿಂದ ಜನಿಸಿದ ಮಗು ಎಂದು ಹೇಳಿ ಯಾರದ್ದೊ ಮಗುವನ್ನು ತಂದು ಕೊಟ್ಟು ತನಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಧನ್ ಬೊಸ್ಕೋ ಎಂಬುವರು ನಂದಿನಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆ.ಟಿ ಗುರುಮೂರ್ತಿಯನ್ನು ಬಂಧಿಸಿದ್ದರು. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದುವರೆಗೂ 21 ಜನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಗುರುಮೂರ್ತಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.