ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಒತ್ತುವರಿ ತೆರವಿಗೆ ಹೈಕೋರ್ಟ್ ತಡೆ

ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ವಾಸವಿರುವ ಕೊಳೆಗೇರಿ ನಿವಾಸಿಗಳನ್ನು ತೆರವುಗೊಳಿಸದಿರುವ ಕುರಿತು...

Rashmi Kasaragodu
Updated On : 21 Oct 2014, 11:35 am

ಬೆಂಗಳೂರು: ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ವಾಸವಿರುವ ಕೊಳೆಗೇರಿ ನಿವಾಸಿಗಳನ್ನು ತೆರವುಗೊಳಿಸದಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಹೈಕೋರ್ಟ್ ಬೆಂಗಳೂರು  ಉತ್ತರ ತಹಸೀಲ್ದಾರ್ ಅವರಿಗೆ ಸೂಚಿಸಿದೆ.

ದಾಸರಹಳ್ಳಿಯ ಮಲ್ಲಸಂದ್ರದ ಬಳಿ ಸುಮಾರು 35 ಎಕರೆ  ಸರ್ಕಾರಿ ಭೂಮಿ ಒತ್ತುವರಿ ಆಗಿರುವುದಾಗಿ ದೂರು ದಾಖಲಾಗಿತ್ತು. ಅದರಂತೆ ಈ ಹಿಂದೆ ವಿಚಾರಣೆ ನಡೆಸಿದ ಹೈಕೋರ್ಟ್ ಒತ್ತುವರಿ ಆಗಿರುವ ಭೂಮಿಯನ್ನು 6 ತಿಂಗಳ ಒಳಗೆ ತೆರವುಗೊಳಿಸುವಂತೆ ಆದೇಶಿಸಿತ್ತು,

ಒತ್ತುವರಿ ಆಗಿರುವ ಸುಮಾರು 25 ಎಕರೆ ಜಾಗದಲ್ಲಿ ಸರ್ವೆ  ನಂಬರ್ 33ರ 4 ಎಕರೆ 30 ಗುಂಟೆಯಲ್ಲಿ ಕೊಳೆಗೇರಿ ನಿವಾಸಿಗಳು ವಾಸವಾಗಿದ್ದು, ಸರ್ಕಾರವೇ ಆ ಜಾಗವನ್ನು ನಿವಾಸಿಗಳಿಗೆ ಹಂಚುವಂತೆ ಬಿಬಿಎಂಪಿಗೆ ಭೂಮಿ ನೀಡಿತ್ತು. ಸರ್ಕಾರದ ಈ ಆದೇಶದ ಅರಿವಿಲ್ಲದ ಬೆಂ.ಉತ್ತರ ತಹಸೀಲ್ದಾರ್ ಕೊಳೆಗೇರಿ ನಿವಾಸಿಗಳಿಗೆ ತೆರವುಗೊಳಿಸುವಂತೆ ಸೂಚಿಸಿದ್ದರು. ವಿಪರ್ಯಾಸವೆಂದರೆ ಇದ್ಯಾವುದರ ಅರಿವೇ ಇಲ್ಲದ ನಿವಾಸಿಗಳಿಗೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸುವಂತೆ ಸೂಚಿಸಿದ್ದು ಚಿಂತೆಗೀಡಾಗುವಂತೆ ಮಾಡಿತು.

ತೆರವುಗೊಳಿಸುವ ಸಂಬಂಧ ಕೊಳೆಗೇರಿ ನಿವಾಸಿಗಳನ್ನು ಪ್ರತಿವಾದಿ ಮಾಡಿ ಆದೇಶವನ್ನು ಮರುಪರಿಶೀಲಿಸುವಂತೆ ನಿವಾಸಿಗಳು ಮತ್ತೊಮ್ಮೆ ಹೈಕೋರ್ಟ್ ಮೊರೆ ಹೋದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಕೆ.ಎಲ್. ಮಂಜುನಾಥ್ ಮತ್ತು ನ್ಯಾ.ರವಿ ಮಳೀಮಠ್ ಅವರ ಪೀಠ , ವಿಚಾರಣೆ ವೇಳೆ ಖುದ್ದು ಹಾಜರಾಗಿದ್ದ ಬೆಂ.ಉತ್ತರ ತಹಸೀಲ್ದಾರ್ ಶಿವಪ್ಪ  ಲಮಾಣಿ ಅವರಿಗೆ, ಸರ್ಕಾರವೇ ನಿವಾಸಿಗಳಿಗೆ ನೀಡಿರುವ ಜಾಗವನ್ನು ತೆರವುಗೊಳಿಸದಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.

ತಾವು ಕಳೆದ 25 ವರ್ಷಗಳಿಂದ ವಾಸವಾಗಿದ್ದು, ಸದ್ಯ ಆ ಜಾಗದಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. ಅದರ ವಾರಸುದಾರರಿಗೆ ಯಾವುದೇ ನೋಟಿಸ್ ನೀಡದೇ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 2010ರಲ್ಲೇ ಸರ್ಕಾರ ಈ ಭೂಮಿಯನ್ನು ಕೊಳೆಗೇರಿ ನಿವಾಸಿಗಳಿಗೆ ಹಂಚುವಂತೆ ಸೂಚಿಸಿ ಬಿಬಿಎಂಪಿಗೆ ಹಸ್ತಾಂತರಿಸಿದೆ. ಅದರಂತೆ ಪಾಲಿಕೆ ಸಹ ನಿವಾಸಿಗಳಿಗೆ ಗಡಿಯನ್ನು ಗುರುತಿಸಿ ವಾರಸುದಾರರಿಗೆ ಗುರುತಿನ ಚೀಟಿ  ನೀಡಿದ್ದಾರೆ ಎಂಬುದು ನಿವಾಸಿಗಳ ವಾದವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement