ರಾಘವೇಶ್ವರ ಶ್ರೀಗಳ ವೈದ್ಯ ಪರೀಕ್ಷೆಗೆ ತಡೆ
ರಾಮಚಂದ್ರಾಪುರ ಮಠದ ರಾಘವೇಶ್ವರಭಾರತಿ ಶ್ರೀಗಳಿಗೆ ವೈದ್ಯ ಪರೀಕ್ಷೆಗೆ...
ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರಭಾರತಿ ಶ್ರೀಗಳಿಗೆ ವೈದ್ಯ ಪರೀಕ್ಷೆಗೆ ಒಳಪಡುವಂತೆ ಸಿಐಡಿ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮಂಗಳವಾರ ಬೆಳಗ್ಗೆ 9.10ಕ್ಕೆ ಹಾಜರಾಗುವಂತೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು.
ಸಿಐಡಿ ನೋಟಿಸ್ಗೆ ತಡೆ ನೀಡಬೇಕೆಂದು ಕೋರಿ ಶ್ರೀಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ. ಆನಂದ್ ಭೈರಾರೆಡ್ಡಿ ಅವರ ಪೀಠ ಮಧ್ಯಂತರ ತಡೆ ನೀಡಿ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ ತನ್ನ ಆಕ್ಷೇಪಣೆ ಸಲ್ಲಿಸಲು ತಡ ಮಾಡಿದ್ದೇ ಆದಲ್ಲಿ ಶ್ರೀಗಳು ಪರೀಕ್ಷೆ ಎದುರಿಸಬೇಕಾಗುತ್ತದೆ. ಆದ್ದರರಿಂದ ಶ್ರೀಗಳಿಗೆ ವೈದ್ಯ ಪರೀಕ್ಷೆಗೆ ಹಾಜರಾಗಬೇಕೆಂದು ನೀಡಿರುವ ನೋಟಿಸ್ ರದ್ದು ಪಡಿಸ ಬೇಕೆಂದು ಶ್ರೀಗಳ ಪರ ವಕೀಲರು ವಾದ ಮಂಡಿಸಿದರು.
ವಾದ ಪುರಸ್ಕರಿಸಿದ ಪೀಠ, ಸರ್ಕಾರ ಆಕ್ಷೇಪಣೆ ಸಲ್ಲಿಸಲು ತಡ ಮಾಡಿದ್ದೇ ಆದಲ್ಲಿ ಈ ಅರ್ಜಿಗೆ ಮಾನ್ಯತೆ ಇಲ್ಲದಂತಾಗಬಹುದು ಎಂದು ಅಭಿಪ್ರಾಯಪಟ್ಟು ಮಧ್ಯಂತರ ತಡೆ ನೀಡಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಶ್ರೀಗಳ ಪರ ವಕೀಲರ ವಾದ
- ಶ್ರೀಗಳು ಈಗಾಗಲೇ ಸುದೀರ್ಘ ಅವಧಿಯ ವಿಚಾರಣೆಗೆ ಒಳಪಟ್ಟಿದ್ದಾರೆ. ತನಿಖೆಗೆ ಎಲ್ಲ ರೀತಿಯಲ್ಲಿಯೂ ಸಹಕರಿಸಿದ್ದಾರೆ.
- ಘಟನೆ 2010ರಲ್ಲಿ ನಡೆದಿದೆ ಎಂದು ದೂರು ದಾಖಲಾಗಿದೆ. ನಿಯಮದ ಪ್ರಕಾರ ಘಟನೆಯ ತಕ್ಷಣವೇ ವೈದ್ಯ ಪರೀಕ್ಷೆ ನಡೆಯಬೇಕು
- ದೂರುದಾರರು ನಾಲ್ಕು ವರ್ಷ ಕಳೆದ ನಂತರ ದೂರು ದಾಖಲಿಸಿದ್ದಾರೆ. ಈಗ ವೈದ್ಯ ಪರೀಕ್ಷೆ ಮಾಡುವುದರಿಂದ ಪ್ರಯೋಜನವಿಲ್ಲ.
- ಶ್ರೀಗಳು ಎಲ್ಲೂ ತಾವು ದೈಹಿಕವಾಗಿ ಅಸಮರ್ಥರು ಎಂದು ಹೇಳಿಕೊಂಡಿಲ್ಲ. ತಾವೂ ಸಾಮಾನ್ಯ ಮನುಷ್ಯರಂತೆ ಎಂದು ಹೇಳಿಕೆ ನೀಡಿದ್ದಾರೆ.
- ಸಿಆರ್ಪಿಸಿ 53(ಎ) ಅನ್ವಯ ನೋಟಿಸ್ನಲ್ಲಿ ವೈದ್ಯ ಪರೀಕ್ಷೆಯನ್ನು ವಿವರಿಸಬೇಕು. ಯಾವ ಪರೀಕ್ಷೆ, ಅದರ ಅಗತ್ಯ ಕುರಿತು ಮಾಹಿತಿ ನೀಡಬೇಕು.
- ಯಾವುದೇ ವಿವರ ನೀಡದೇ ಸಿಐಡಿ ಅಧಿಕಾರಿಗಳು ವದೈಯ್ ಪರೀಕ್ಷೆಗೆ ಹಾಜರಾಗುವಂತೆ ನೋಟಿಸ್ ನೀಡಿರುವುದು ನ್ಯಾಯತ ಸಮ್ಮತವಲ್ಲ.
- ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿದ್ದು, ಅಪಾರ ಭಕ್ತರಿದ್ದಾರೆ.
- ಸಿಐಡಿಯ ವರ್ತನೆಯಿಂದಾಗಿ ಶ್ರೀಗಳ ಮೂಲಭೂತ ಹಾಗೂ ಖಾಸಗಿ ಹಕ್ಕಿಗೆ ಧಕ್ಕೆ ಉಂಟಾಗುತ್ತದೆ.