ವಿಬ್ಗ್ಯೊರ್ ಪ್ರಕರಣ: 3 ಆರೋಪಿಗಳ ವಿರುದ್ಧ ಚಾರ್ಜ್ಶೀಟ್
ವರ್ತೂರಿನ ವಿಬ್ಗ್ಯೊರ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ...
ಬೆಂಗಳೂರು: ವರ್ತೂರಿನ ವಿಬ್ಗ್ಯೊರ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ವರ್ತೂರು ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ವಿಬ್ಗ್ಯೊರ್ ಶಾಲೆ ಮುಖ್ಯಸ್ಥ ರುಸ್ತುಂ ಕೇರಾವಾಲ, ಜಿಮ್ನಾಸ್ಟಿಕ್ ತರಬೇತುದಾರ ಲಾಲ್ ಗಿರಿ ಹಾಗೂ ವಾಸಿಂ ಪಾಷಾ ವಿರುದ್ಧ ನಗರದ ಸೆಷನ್ಸ್ ನ್ಯಾಯಾಲಯಕ್ಕೆ 750 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿದೆ.
ಪ್ರಕರಣ ಸಂಬಂಧ ಮೂವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಇಬ್ಬರು ತರಬೇತುದಾರರ ವಿರುದ್ಧ ಅತ್ಯಾಚಾರ ಆರೋಪ ಮತ್ತು ಪೋಕ್ಸೋ ಕಾಯ್ದೆ ಅನ್ವಯ ಮತ್ತು ಶಾಲಾ ಮುಖ್ಯಸ್ಥನ ವಿರುದ್ಧ ಸಾಕ್ಷ್ಯ ನಾಶ ಆರೋಪದನ್ವಯ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ನಡೆದಿದ್ದೇನು?: ಮಾರತ್ಹಳ್ಳಿ ಮುಖ್ಯ ರಸ್ತೆಯ ವಿಬ್ಗ್ಯೊರ್ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿರುವ ಸಂಬಂಧ ಜು.14ರಂದು ವರ್ತೂರು ಠಾಣೆಯಲ್ಲಿ ಪಾಲಕರು ದೂರು ನೀಡಿದ್ದರು. ಪೊಲೀಸರು ಶಂಕಿತ ಆರೋಪಿ ಸ್ಕೇಟಿಂಗ್ ತರಬೇತುದಾರ ಮುಸ್ತಾಫನನ್ನು ಬಂಧಿಸಿದ್ದರು.
ಆತನ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಆತನ ಹೆಸರು ಕೈ ಬಿಡಲಾಗಿತ್ತು. ಎರಡು ವರ್ಷಗಳಿಂದ ಶಾಲೆಯ ಜಿಮ್ನಾಸ್ಟಿಕ್ ತರಬೇತುದಾರನಾಗಿದ್ದ ಬೊಮ್ಮನಹಳ್ಳಿ ನಿವಾಸಿ ಲಾಲ್ ಗಿರಿ ಹಾಗೂ ಮೂರು ವರ್ಷಗಳಿಂದ ಜಿಮ್ನಾಸ್ಟಿಕ್ ತರಬೇತಿ ನೀಡುತ್ತಿದ್ದ ಬಸವ ನಗರ ನಿವಾಸಿ, ಗುಲ್ಬರ್ಗ ಜಿಲ್ಲೆಯ ವಾಸಿಂ ಪಾಷಾನನ್ನು ಬಂಧಿಸಿದ್ದರು.
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಕಾರಣ ರುಸ್ತುಂ ಕೇರವಾಲಾರನ್ನು ಪೊಲೀಸರು ಬಂಧಿಸಿದ್ದರು.