ಬಿಬಿಎಂಪಿಗೆ 5000 ಕಡತ ವಿಲೇವಾರಿಯ ಗುರಿ
ಬಿಬಿಎಂಪಿ ಹಮ್ಮಿಕೊಂಡ ಬಾಕಿ ಕಡತ...
ಬೆಂಗಳೂರು: ಬಿಬಿಎಂಪಿ ಹಮ್ಮಿಕೊಂಡ ಬಾಕಿ ಕಡತಗಳ ವಿಲೇವಾರಿ ಸಪ್ತಾಹದಲ್ಲಿ 5 ಸಾವಿರಕ್ಕೂ ಅಧಿಕ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಕೃಷ್ಣ ವಲಯಗಳ ಜಂಟಿ ಆಯುಕ್ತರಿಗೆ ಸೂಚಿಸಿದ್ದಾರೆ.
ಜಂಟಿ ಆಯುಕ್ತರೊಂದಿಗೆ ಸೋಮವಾರ ಪರಿಶೀಲನಾ ಸಭೆ ನಡೆಸಿದ ಎಂ. ಕೃಷ್ಣ ಅವರು, ಅ.20 ರಿಂದ 31ರವರೆಗೆ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಈ ವೇಳೆ 5 ಸಾವಿರಕ್ಕೂ ಹೆಚ್ಚಿನ ಕಡತಗಳು ವಿಲೇವಾರಿಯಾಗಬೇಕು. ಆಡಳಿತದಲ್ಲಿ ಬಿಗಿ ತರಲು ಚಲನವಲನ ಪುಸ್ತಕಗಳನ್ನು ನಿರ್ವಹಣೆ ಮಾಡಬೇಕು. ಹಾಜರಾತಿ ಕಡ್ಡಾಯಗೊಳಿಸಲು ನವೆಂಬರ್ ತಿಂಗಳೊಳಗಾಗಿ ಎಲ್ಲ ಕಚೇರಿಗಳಲ್ಲಿ ಬಯೋವುಟ್ರಿಕ್ ಯಂತ್ರಗಳನ್ನು ಅಳವಡಿಸಬೇಕು. ಪಾಲಿಕೆಯಲ್ಲಿ ಸುಮಾರು 600 ಬ್ಯಾಂಕ್ ಖಾತೆಗಳಿದ್ದು, ಎಲ್ಲ ಖಾತೆಗಳಲ್ಲಿ ವಹಿವಾಟು ನಡೆಸುವುದು ನಿಲ್ಲಿಸಬೇಕು. ಇದರ ಬದಲು ಕೋರ್ ಬ್ಯಾಂಕ್‌ಗಳಲ್ಲಿ ಮುಖ್ಯ ಖಾತೆಗಳನ್ನು ಇಟ್ಟುಕೊಂಡು ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಯಿತು.
ಸಮಿತಿ ಸದಸ್ಯ ಗುಣಶೇಖರ ಮಾತನಾಡಿ, ಪಾಲಿಕೆಯಲ್ಲಿ ಇ-ಆಡಳಿತಕ್ಕೆ ಹೆಚ್ಚು ಗಮನ ನೀಡಬೇಕು. ಖಾತೆ ನೋಂದಣಿ, ನಕ್ಷೆ ಮಂಜೂರು, ಜನನ ಹಾಗೂ ಮರಣ ಪ್ರಮಾಣ ಪತ್ರ ಹಾಗೂ ಸುತ್ತೋಲೆಗಳ ಬಗ್ಗೆ ಅಂತರ್ಜಾಲ ತಾಣದಲ್ಲಿ ಕಾಲಕಾಲಕ್ಕೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.