ಎರ್ರಾಬಿರ್ರಿ ರಸೀದಿ ನೀಡುವ ಎರ್ರಿಸ್ವಾಮಿ
ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲು ಹೆಂಗಸರ ಚಪ್ಪಲಿ, ಉಡುಪುಗಳ ಖರೀದಿಯೂ ಅಗತ್ಯ!..
ಬೆಂಗಳೂರು: ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲು ಹೆಂಗಸರ ಚಪ್ಪಲಿ, ಉಡುಪುಗಳ ಖರೀದಿಯೂ ಅಗತ್ಯ!
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾಡುತ್ತಿರುವ ವಂಚನೆಯ ಸಣ್ಣ ಸ್ಯಾಂಪಲ್ ಇದು.
೨೧೦೨-೧೩ ನೆ ಸಾಲಿನಿಂದ ಬಳ್ಳಾರಿ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಸಮ್ಮೇಳನಗಳನ್ನು ಇವರೇ ಮುಂದೆ ನಿಂತು ಭರ್ಜರಿಯಾಗಿ ನಡೆಸುತ್ತಾ ಬಂದಿದ್ದಾರೆ. ಆದರೆ ಬೆಂಗಳೂರಿನ ಕೇಂದ್ರ ಸಾಹಿತ್ಯ ಪರಿಷತ್ತಿಗೆ ಸಲ್ಲಿಕೆಯಾಗಿರುವ ರಶೀದಿಗಳನ್ನು ನೋಡಿದರೆ ಇವರು ನೆರವೇರಿಸಿದ್ದು ಮದುವೆ ಸಮಾರಂಭವನ್ನೋ, ಸಾಹಿತ್ಯದ ಕಾರ್ಯಕ್ರಮವನ್ನೋ ಎಂಬ ಅನುಮಾನ ಬರುವಂತಿದೆ. ಏಕೆಂದರೆ, ಅವರು ಸಲ್ಲಿಸಿರುವ ರಸೀದಿಗಳಲ್ಲಿ ಹೆಂಗಸರ ಪ್ಯಾಂಟ್(ಲೆಗ್ಗಿಂಗ್ಸ್) ಹಾಗೂ ಚಪ್ಪಲಿ ಖರೀದಿಯ ಉಲ್ಲೇಖವೂ ಇದೆ! ಸಾಹಿತ್ಯದ ಕಾರ್ಯಕ್ರಮಕ್ಕೆ ಬರುವ ಹಣ ಎಲ್ಲಿಗೆ ಹೋಗುತ್ತದೆ ಎಂಬುದು ಇದರಿಂದ ಅರಿವಾಗುತ್ತದೆ.
ಈ ಅಕ್ರಮಕ್ಕೆ ದಾಖಲೆ ನೀಡಲು ಫೋರ್ಜರಿ ಸಹಿ ಮಾಡುವುದಲ್ಲದೆ, ಮಳಿಗೆಗಳಿಂದ ಖಾಲಿ ರಸೀದಿ ಪಡೆದು ತಾವೇ ಭರ್ತಿ ಮಾಡುತ್ತಾರೆ ಎಂದು ಕೇಂದ್ರ ಕಸಾಪದ ಲೆಕ್ಕ ಪರಿಶೋಧಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ವಿಚಿತ್ರವೆಂದರೆ, ಬಳ್ಳಾರಿ ಸಾಹಿತ್ಯ ಕಾರ್ಯಕ್ರಮಗಳಿಗೆ ಬೆಂಗಳೂರಿನಲ್ಲಿ ಖರೀದಿ ನಡೆಯುತ್ತದೆ. ೨೦೧೪ರ ಜೂನ್ ೧೪ ರಂದು ಬಳ್ಳಾರಿಯ ಸಾಹಿತ್ಯ ಕಾರ್ಯಕ್ರಮ ಅಂಗವಾಗಿ ಬೆಂಗಳೂರಿನ ಬನಶಂಕರಿ ೨ನೆ ಹಂತದ ಮಳಿಗೆಯೊಂದರಲ್ಲಿ ಎರ್ರಿಸ್ವಾಮಿ ಚಪ್ಪಲಿಗಳನ್ನು ಖರೀದಿಸಿದ್ದಾರೆ. ಇದರ ಮೊತ್ತ ಬರೋಬ್ಬರಿ ೧೮೩೧ ರೂ. ಆದರೆ ಯಾರಿಗಾಗಿ ಈ ಖರೀದಿ ನಡೆಯಿತು, ಎಷ್ಟು ಮಂದಿಗೆ ಎಂಬ ಮಾಹಿತಿಯಿಲ್ಲ. ಮತ್ತೊಂದು ರಸೀದಿಯಲ್ಲಿ ಲೆಗ್ಗಿಂಗ್ಸ್ ಖರೀದಿಯ ಉಲ್ಲೇಖವಿದೆ. ರೂ ೨೯೯ಕ್ಕೆ ಈ ಖರೀದಿ ನಡೆದಿದೆ. ಸಾಹಿತ್ಯ ಕಾರ್ಯಕ್ರಮಗಳಿಗೆ ಚಪ್ಪಲಿ ಹಾಗು ಉಡುಪುಗಳ ಖರೀದಿ ಏಕೆ ನಡೆಯಿತು? ಅದರ ಅಗತ್ಯವೇನು ಎಂಬ ಬಗ್ಗೆ ಲೆಕ್ಕ ಪರಿಶೋಧಕರು ಕೇಳಿದರೆ ಎರ್ರಿಸ್ವಾಮಿ ಉತ್ತರವಿಲ್ಲ.
ಎರ್ರಿಸ್ವಾಮಿ ಅವರ ಎರ್ರಾಬಿರ್ರಿ ಬಿಲ್ಲಿಗೆ ಸಾಹಿತ್ಯ ಪರಿಷತ್ತು ಕಕ್ಕಾಬಿಕ್ಕಿಯಾಗಿದೆ. ಅವರು ಯಾರಿಗೋ ಕೊಡಿಸಿದ ಚಪ್ಪಲಿ (ಅವರಿಗಾಗಿ ಖರೀದಿ ಮಾಡಿದ್ದಲ್ಲ. ಯಾಕೆಂದರೆ ಅದು ಹೆಂಗಸರ ಚಪ್ಪಲಿ), ಲೆಗ್ಗಿಂಗ್ಸ್ ಗಳಿಗೆ ಪರಿಷತ್ತು ಹಣ ನೀಡುವಂತಾಗಿದೆ.
ಸಾಹಿತ್ಯ ಕಾರ್ಯಕ್ರಮಗಳ ನೆಪದಲ್ಲಿ ಪೆಟ್ರೋಲ್ ಖರೀದಿ ಜೋರಾಗಿ ನಡೆದಿದೆ. ಆದರೆ ಈ ಖರಿದಿಯೂ ಬೆಂಗಳುರಿನಲ್ಲೆ ನಡೆದಿದೆ. ೨೦೧೪ ರ ಜೂನ್ ೧೭ ರಂದು ಪ್ಯಾಲೆಸ್ ರಸ್ತೆಯ ಪೆಟ್ರೋಲ್ ಬಂಕ್ ನಲ್ಲಿ ರೂ ೨೫೦೦ ರಷ್ಟು ಪೆಟ್ರೋಲ್ ಖರೀದಿಸಲಾಗಿದೆ. ಇಲ್ಲಿಯೂ ಅನುಮಾನಕ್ಕೆಡೆ ಮಾಡುವಂತೆ '೨೭' ಎಂಬ ದಿನಾಂಕವನ್ನು ತಿದ್ದಿ '೧೭' ಎಂದು ಬರೆಯಲಾಗಿದೆ. ಬಳ್ಳಾರಿಯ ಸಾಹಿತ್ಯೋತ್ಸವಕ್ಕೆ ಬೆಂಗಳೂರಿನ ಪೆಟ್ರೋಲ್ ಬಂಕಿಗೋ ಎತ್ತಣೆಂದೆತ್ತ ಸಂಬಂಧವಯ್ಯಾ ಅಂದರೆ ಎರ್ರಿಸ್ವಾಮಿ ಸದ್ದಿಲ್ಲದೇ ಜಾಗ ಖಾಲಿ ಮಾಡುತ್ತಾರೆ.
ಎರ್ರಿಸ್ವಾಮಿ ವಿರುದ್ಧ ಕ್ರಮ ಪುಂಡಲೀಕ ಹಾಲಂಬಿ
ಕಳೆದ ವರ್ಷದಿಂದ ಎರ್ರಿಸ್ವಾಮಿ ನಕಲಿ ಬಿಲ್ ಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿಗೆ ವಂಚಿಸಿದ್ದಾರೆ. ವರ್ಷದ ಆರಂಭದಲ್ಲೇ ಜಿಲ್ಲಾ ಪರಿಷತ್ತಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಕೊನೆಯಲ್ಲಿ ಯಾವ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡಲಾಗಿದೆ ಎಂದು ಕೇಳಿದರೆ ಎರ್ರಿಸ್ವಾಮಿ ಸಮರ್ಪಕ ಉತ್ತರ ನೀಡುವುದಿಲ್ಲ. ಸಾಹಿತ್ಯ ಕಾರ್ಯಕ್ರಮಗಳಿಗಾಗಿ ನೀಡಿದ ಹಣವನ್ನು ಕುಟುಂಬಕ್ಕಾಗಿ ಬಳಸಿಕೊಂಡು ಚಪ್ಪಲಿ ಹಾಗು ಹೆಂಗಸರ ಉಡುಪುಗಳನ್ನು ಖರೀದಿಸಲಾಗಿದೆ. ಈಗಾಗಲೇ ಸಾಕಷ್ಟು ನಕಲಿ ಬಿಲ್ ನೀಡಿ ವಂಚಿಸಿದ್ದು ಬೆಳಕಿಗೆ ಬಂದಿದೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಎರ್ರಿಸ್ವಾಮಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.
ಕಾರ್ತಿಕ್ ಭಟ್